ಶ್ರೀಲಂಕಾದಲ್ಲಿ ಪ್ರತಿಭಟನೆ ಮತ್ತೆ ತೀವ್ರಗೊಂಡಿದ್ದು, ಶನಿವಾರ ಕೊಲಂಬೊದ ತಮ್ಮ ಮನೆಯನ್ನು ಪ್ರತಿಭಟನಾಕಾರರು ಹಾಕಿದ್ದಾರೆ. ಸುತ್ತ ಸುತ್ತುವರಿದ ಜನ ಪ್ರವಾಹ ಕಂಡ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಓಟ ಕಿತ್ತಿದ್ದಾರೆ.
ಶ್ರೀಲಂಕಾದಲ್ಲಿ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಅವುಗಳ ಬೆಲೆ ಗಗನಕ್ಕೇರಿದೆ. ಇವೆಲ್ಲಾ ಸಮಸ್ಯೆಗಳಿಂದ ಕಂಗಾಲಾಗಿರುವ ಜನತೆ ರಾಷ್ಟ್ರಪತಿ ನಿವಾಸಕ್ಕೆ ಸಾಗರೋಪಾದಿಯಲ್ಲಿ ಸುತ್ತುವರಿದು ಮುತ್ತಿಗೆ ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾಕಾರರು ಮುತ್ತಿಗೆ ಹಾಕುತ್ತಿದ್ದಂತೆ ಸೇನೆ ಸಹಾಯದಿಂದ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಅಧ್ಯಕ್ಷ ಗೋತಬಯ ರಾಜಪಕ್ಷ ಸೇನಾ ಪ್ರಧಾನ ಕೇಂದ್ರಕ್ಕೆ ಪಲಾಯನ ಮಾಡಿದರು ಎಂದು ಉನ್ನತ ರಕ್ಷಣಾ ಮೂಲವು ತಿಳಿಸಿದೆ.
ಅಷ್ಟೇ ಅಲ್ಲದೆ, ಪ್ರತಿಭಟನಾಕಾರರು ರಾಷ್ಟ್ರಪತಿ ಭವನದಲ್ಲಿರುವ ಈಜುಕೊಳಕ್ಕೆ ಇಳಿದು ಈಜು ಹೊಡೆಯುವ ದೃಶ್ಯ ಕಂಡುಬರುತ್ತಿದೆ. ಅಲ್ಲಿ ನೀರಿಗಿಳಿದು ಜಲಕ್ರೀಡೆ ಆಡುತ್ತಿದ್ದಾರೆ. ಇದು ಅರಾಜಕತೆಯ ಪರಿಸ್ಥಿತಿಯನ್ನು ತೋರಿಸುತ್ತಿದೆ.
ದೂರದರ್ಶನದ ದೃಶ್ಯಾವಳಿಗಳು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಅಧ್ಯಕ್ಷರ ಮನೆಯ ಕಾಂಪೌಂಡ್‌ಗೆ ನುಗ್ಗುತ್ತಿರುವುದನ್ನು ತೋರಿಸಿವೆ. ಅಧ್ಯಕ್ಷರನ್ನು ಸುರಕ್ಷತೆಗಾಗಿ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ. ಆಕ್ರೋಶಗೊಂಡ ಜನಸಮೂಹ ಅಧ್ಯಕ್ಷರ ಭವನವನ್ನು ಅತಿಕ್ರಮಿಸುವುದನ್ನು ತಡೆಯಲು ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ನಡುವೆ ಪ್ರಧಾನಿ ರಣಿಲ್ ವಿಕ್ರಮಸಿಂಘ ತುರ್ತು ಸಂಪುಟ ಸಭೆಯನ್ನು ಕರೆದಿದ್ದಾರೆ.
