ಬೆಂಗಳೂರು: ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆಯ ಪತ್ರವೊಂದು ಬಂದಿದ್ದು, ಪೋಷಕರ ಸಹಿತ ಶಿಕ್ಷಕರನ್ನು ಆತಂಕಕ್ಕೀಡುಮಾಡಿದ ಘಟನೆಯೊಂದು ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು, ಡಾಗ್ ಸ್ಕ್ವಾಡ್ ಮತ್ತು ಬಾಂಬ್ ನಿಷ್ಕ್ರಿಯ ದಳ ಆಗಮಿಸಿದೆ.
ಇ-ಮೇಲ್ ಮೂಲಕ ಬಂದ ಪತ್ರದಲ್ಲ ಶಾಲೆಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬರೆಯಲಾಗಿದ್ದು, ಕೂಡಲೇ ವಿಷಯವನ್ನು ಪೊಲೀಸರಿಗೆ ಮುಟ್ಟಿಸಲಾಗಿತ್ತು. ಆ ಶಾಲೆಯಲ್ಲಿ ಸಾವಿರಾರು ಮಂದಿ ಕಲಿಯುತ್ತಿದ್ದಾರೆ. ಮೇಲ್ ನ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ನೀಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸಾಗರೋಪಾದಿಯಲ್ಲಿ ಮಕ್ಕಳ ಪೋಷಕರು ಶಾಲೆಯತ್ತ ಧಾವಿಸಿದ್ದಾರೆ. ತಮ್ಮ ಮಕ್ಕಳನ್ನು ತೋರಿಸುವಂತೆ ಪೋಷಕರು ಹಠ ಮಾಡುತ್ತಿದ್ದಾರೆ.
ಸದ್ಯ ಶಾಲೆಗೆ ಪೊಲೀಸರ ಸಹಿತ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಹಿತ ಪೊಲೀಸ್ ಅಧಿಕಾರಿಗಳು ಬೀಡುಬಿಟ್ಟಿದ್ದು, ಕೂಲಂಕುಷ ಪರಿಶೀಲನೆಯೊಂದಿಗೆ, ಶೋಧ ಕಾರ್ಯ ಹಾಗೂ ವಾಹನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ.
ನಿನ್ನೆಯೇ ಬೆದರಿಕೆ ಮೇಲ್ ನೀಡಲಾಗಿದ್ದು, ಇವತ್ತು ಸ್ಕೂಲ್ ಓಪನ್ ಮಾಡಿ ಮೇಲ್ ಚೆಕ್ ಮಾಡುವಾಗ ಈ ಸುದ್ದಿ ತಿಳಿದಿದೆ. ಸ್ಥಳಕ್ಕೆ ಆಡಳಿತ ಮಂಡಳಿಯ ಮುಖ್ಯಸ್ಥೆ ಆದ ಡಿಕೆಶಿ ಪುತ್ರಿ ಐಶ್ವರ್ಯ ಅವರು ಮತ್ತಿತರರು ಆಗಮಿಸಿ ಪೊಲೀಸರಿಂದ ಮಾಹಿತಿ ಪಡೆಯುತ್ತಿದ್ದಾರೆ.
