ಕುಂಬಳೆ: ಕಾಸರಗೋಡು ಕುಂಬಳೆಯ ಸಮೀಪದ ಬಟ್ಟೆ ಮಳಿಗೆಯೊಂದರಲ್ಲಿ ಖರೀದಿಸಿದ ಹೊಸ ಬಟ್ಟೆಯ ಅಳತೆ ಪರೀಕ್ಷಿಸಲು ಟ್ರಯಲ್ ರೂಮ್ ಗೆ ತೆರಳಿದ್ದ ಯುವತಿಯೊಬ್ಬಳು ಬಟ್ಟೆ ಬದಲಾಯಿಸುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಯುವಕನೊಬ್ಬನನ್ನು ಪೋಕ್ಸೋ ಪ್ರಕರಣದಡಿಯಲ್ಲಿ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಟ್ಟೆ ಮಳಿಗೆಯ ನೌಕರ ಆಸೀಫ್(24)ಎಂದು ಗುರುತಿಸಲಾಗಿದೆ.ಈತ ಕುಂಬಳೆಯ ಬಟ್ಟೆ ಮಳಿಗೆಯಲ್ಲಿ ಕೆಲಸಕ್ಕಿದ್ದು, ಅದೇ ಮಳಿಗೆಗೆ ಸ್ಪೋರ್ಟ್ಸ್ ಡ್ರೆಸ್ ಖರೀದಿಸಲು ಯುವತಿಯೊಬ್ಬಳು ಬಂದಿದ್ದಳು ಎನ್ನಲಾಗಿದೆ.
ಘಟನೆ ವಿವರ: ಯುವತಿಯೊಬ್ಬಳು ತನ್ನ ಸಂಬಂಧಿಕರ ಜೊತೆಗೆ ಸ್ಪೋರ್ಟ್ಸ್ ಡ್ರೆಸ್ ಖರೀದಿಸಲೆಂದು ಕುಂಬಳೆಯಲ್ಲಿರುವ ಬಟ್ಟೆ ಮಳಿಗೆಯೊಂದಕ್ಕೆ ಬಂದಿದ್ದಳು. ಈ ವೇಳೆ ಆಕೆಗೆ ಬಟ್ಟೆಗಳನ್ನು ತೋರಿಸಿದ ನೌಕರ ಯುವಕ ಎಲ್ಲಾ ವಿಧದ ಬಟ್ಟೆಗಳನ್ನು ತೋರಿಸಿದ್ದ. ಅವುಗಳ ಹಲವಾರು ವಿನ್ಯಾಸದ ಬಣ್ಣ ಬಣ್ಣದ ಬಟ್ಟೆಗಳಲ್ಲಿ ಒಂದನ್ನು ಆಯ್ದುಕೊಂಡ ಯುವತಿ ಅದರ ಅಳತೆ ಪರಿಶೀಲಿಸಲು ಮುಂದಾದಳು.
ಈ ವೇಳೆಗೆ ಆಕೆಗೆ ಬಟ್ಟೆ ಬದಲಾವಣೆಯ ಕೊಠಡಿ ತೋರಿಸಿದ ಯುವಕ ಆಕೆಯನ್ನು ಬಟ್ಟೆ ಬದಲಾವಣೆಗೆ ಕಳುಹಿಸಿದ್ದ. ಯುವತಿ ಖರೀದಿಸಿದ ಬಟ್ಟೆಯ ಅಳತೆ ನೋಡಲು ಬಟ್ಟೆ ಬದಲಾಯಿಸುವ ಕೋಣೆಯೊಳಗೆ ತೆರಳಿ ಬಟ್ಟೆ ಬದಲಾಯಿಸುತ್ತಿರುವಾಗ ಆರೋಪಿ ಯುವಕ, ಆಕೆ ಬಟ್ಟೆ ಬದಲಾಯಿಸುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ಎನ್ನಲಾಗಿದೆ.
ಬಟ್ಟೆ ಬದಲಾಯಿಸಿ, ಹೊಸ ಬಟ್ಟೆಯ ಅಳತೆ ನೋಡಿಕೊಂಡು ಹೊರಬರುವಾಗ ಈ ವಿಚಾರ ಯುವತಿಯ ಗಮನಕ್ಕೆ ಬಂದಿದ್ದು, ಆತನನ್ನು ಪ್ರಶ್ನಿಸಿದಾಗ ಚಿತ್ರೀಕರಣ ನಡೆಸಿದ್ದು ಬೆಳಕಿಗೆ ಬಂದಿದೆ. ಸದ್ಯ ಬಟ್ಟೆ ಮಳಿಗೆಗೆ ಈ ಮೊದಲು ತೆರಳಿದ್ದ ಯುವತಿಯರಲ್ಲಿ ಆತಂಕ ಮನೆ ಮಾಡಿದ್ದು, ಈತ ಈ ವರೆಗೆ ಅದೆಷ್ಟು ಮಂದಿ ಯುವತಿಯರ ಬಟ್ಟೆ ಬದಲಾವಣೆಯ ವೀಡಿಯೋ ಸೆರೆ ಹಿಡಿದಿದ್ದಾನೆ ಎನ್ನುವುದು ತನಿಖೆಯ ಬಳಿಕ ಹೊರಬರಬೇಕಿದೆ. ಯುವತಿ ನೀಡಿದ ದೂರನಂತೆ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಆಸೀಫ್ ನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಒಳ ಪಡಿಸಿದ್ದಾರೆ.
