ಬಂಟ್ವಾಳ:ಮನೆಯಂಗಳದಲ್ಲೇ ವಾಹನ ಇಳಿದು ಇನ್ನೇನು ಮನೆ ಸೇರಬೇಕೆಂದು ಖುಷಿಯಿಂದ ಹೆಜ್ಜೆ ಹಾಕಿದ ಪುಟ್ಟ ಬಾಲಕ, ವಾಹನದಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆಯೊಂದು ತಾಲೂಕಿನ ಸುರಿಬೈಲು ಎಂಬಲ್ಲಿ ನಡೆದಿದೆ.
ಮೃತ ಬಾಲಕನನ್ನು ಸುರಿಬೈಲು ನಿವಾಸಿ ಕೆ.ಕೆ ಕಲಂದರ್ ಅಲಿ ಎಂಬವರ ಪುತ್ರ ಅಬ್ದುಲ್ ಖಾದರ್ ಹಾದಿ(04) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಆಂಗ್ಲಮಾಧ್ಯಮ ಶಾಲೆಯೊಂದರ ಎಲ್.ಕೆ.ಜಿ ವಿದ್ಯಾರ್ಥಿಯಾಗಿದ್ದು, ಎಂದಿನಂತೆ ಶಾಲೆಯಿಂದ ವಾಹನದಲ್ಲಿ ಮನೆಗೆ ಬಂದಿದ್ದ ಎನ್ನಲಾಗಿದೆ.
ವಾಹನ ಚಾಲಕ ಬಾಲಕನನ್ನು ಮನೆಯಂಗಳದಲ್ಲಿ ಇಳಿಸಿದ್ದು, ಮನೆಯತ್ತ ಹೆಜ್ಜೆ ಹಾಕಿದ ಎಂದು ಭಾವಿಸಿ ವಾಹನ ಚಲಾಯಿಸಿದ್ದಾನೆ. ಈ ವೇಳೆ ಬಾಲಕ ಚಕ್ರದಡಿಗೆ ಸಿಲುಕಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಯನ್ನು ಮನೆ ಮಂದಿ ಕಣ್ಣಾರೆ ಕಂಡಿದ್ದು, ಹೆತ್ತ ಮಗನ ಸಾವನ್ನು ಕಂಡ ತಾಯಿಯ ರೋಧನ ಹೃದಯ ಹಿಂಡುವಂತಿತ್ತು. ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
