ಮಹಿಳೆಯೋರ್ವರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ದಿಢೀರನೆ ಸಾವಿಗೀಡಾ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
ಈ ಘಟನೆ ಹೈದರಾಬಾದ್‍ನ ಪೆಟ್ಲಾ ಬುರ್ಜ್‍ನಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸಂಭವಿಸಿದೆ. ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಕೆಲವು ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಆಕೆಯನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಹಿಳೆಯ ಸಾವಿಗೆ ನಿಖರ ಕಾರಣ ಏನು ಎಂಬುವುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಈ ಸಾವಿಗೆ ಕಾರಣವೇನು ಎಂಬುವುದರ ಬಗ್ಗೆ ಅಧಿಕಾರಿಗಳು ಕೂಡ ಇಲ್ಲಿಯವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
ರಂಗಾ ರೆಡ್ಡಿ ಜಿಲ್ಲೆಯ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಡಬಲ್ ಪಂಕ್ಚರ್ ಲ್ಯಾಪರೊಸ್ಕೋಪಿ (ಡಿಪಿಎಲ್)ಗೆ ಒಳಗಾಗಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ. ಇನ್ನೂ ಮೂವತ್ತು ಮಹಿಳೆಯರು ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿರುವ ಸಿವಿಲ್ ಆಸ್ಪತ್ರೆಯಲ್ಲಿ ಆಗಸ್ಟ್ 25 ರಂದು ನಡೆದ ಸ್ತ್ರೀ ಸಂತಾನಹರಣ ಶಿಬಿರದಲ್ಲಿ ಮಹಿಳೆಯರು ಡಿಪಿಎಲ್ ಮಾಡಿಸಿಕೊಂಡಿದ್ದರು. ನಾಲ್ವರು ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್‍ನಿಂದ ಬಳಲುತ್ತಿದ್ದರು ಮತ್ತು ಇದಕ್ಕೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಸಾವನ್ನಪ್ಪಿದ್ದರು.
ಈಗಾಗಲೇ ಸರಕಾರ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಪರವಾನಿಗೆಯನ್ನು ಅಮಾನತುಗೊಳಿಸಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ಜಿ. ಶ್ರೀನಿವಾಸರಾವ್ ಅವರು ತನಿಖೆಗೆ ಸರ್ಕಾರ ಆದೇಶಿಸಿದೆ.
