Home » ಗಣೇಶ ಚೌತಿ ಹಬ್ಬದ ಸಂದರ್ಭ ಏರಿಕೆ ಆಗಿದ್ದ ಅಡಕೆ ದರ | ಒಂದು ವಾರದಿಂದ ಭಾರೀ ಇಳಿಕೆ

ಗಣೇಶ ಚೌತಿ ಹಬ್ಬದ ಸಂದರ್ಭ ಏರಿಕೆ ಆಗಿದ್ದ ಅಡಕೆ ದರ | ಒಂದು ವಾರದಿಂದ ಭಾರೀ ಇಳಿಕೆ

0 comments

ಗಣೇಶ ಚೌತಿ ಹಬ್ಬದಂದು ಅಡಕೆ ಬೆಳೆಯುವ ರೈತರಿಗೆ ಖುಷಿ ಕೊಟ್ಟಿತ್ತು. ತಿಂಗಳ ಹಿಂದೆ ಬಹಳ ಏರಿಕೆ ಕಂಡು ಬಂದಿದ್ದ ಅಡಕೆ ದರ, ಕಳೆದ ವಾರದಿಂದ ಮತ್ತೆ ಇಳಿಕೆ ಕಂಡು ಬಂದಿದೆ. ಉತ್ತಮ ಬೆಲೆ ಸಿಗುತ್ತೆ ಎಂದು ಅಡಕೆ ದಾಸ್ತಾನು ಮಾಡಿದ್ದ ಬೆಳೆಗಾರರಿಗೆ ಈ ಏರಿಳಿತ ಭಾರೀ ಗೊಂದಲ ಮೂಡಿಸಿದೆ.

ಅಡಕೆ ಪ್ರಮುಖ ಪ್ರಕಾರವಾದ ರಾಶಿ ಅಥವಾ ಕೆಂಪಡಕೆ ದರ ಈ ವಾರದಲ್ಲಿ ಕ್ವಿಂಟಾಲ್‌ ಗೆ 5,000, ಇನ್ನೊಂದು ಪ್ರಮುಖ ಪ್ರಕಾರವಾದ ಚಾಲಿ ಅಡಕೆಯ ದರ ಕ್ವಿಂಟಾಲ್‌ಗೆ ಮೂರು ಸಾವಿರ ರೂ.ಗಳಷ್ಟು ಇಳಿಕೆ ಆಗಿದ್ದು, ನಿಜಕ್ಕೂ ಆತಂಕಕ್ಕೀಡು ಮಾಡಿದೆ ಎಂದೇ ಹೇಳಬಹುದು. ಬೆಳೆಗಾರರಿಗೆ ಈ ಸಂದರ್ಭದಲ್ಲಿ ದರ ಮತ್ತೆ ಇಳಿಕೆಯಾಗುವ ನಿರೀಕ್ಷೆ ಇರಲಿಲ್ಲ ಎಂಬ ಮಾತು ಅಡಕೆ ವಲಯದಲ್ಲಿ ಕೇಳಿ ಬರುತ್ತಿದೆ.

ವಾರಾಂತ್ಯಕ್ಕೆ ಕೆಂಪಡಕೆ ಕನಿಷ್ಠ – ಗರಿಷ್ಠ ದರ 47,000- 50,500 ರೂ.ಗಳಷ್ಟು ಲಭ್ಯವಾಗಿದ್ದರೆ, ಚಾಲಿ ಅಡಕೆ ದರ 40,000-43,500 ರೂ.ಗಳಿಗೆ ಮಾರಾಟವಾಗುತ್ತಿದೆ.

ಒಂದು ಕಡೆಯಲ್ಲಿ ದಿಢೀರ್‌ ಏರಿಕೆಯಾದ ದರ ರೈತರಲ್ಲಿ ಮಂದಹಾಸ ಮೂಡಿಸಿದ್ದಂತೂ ನಿಜ. ಹಾಗೆನೇ ಎಲ್ಲಾ ಕೃಷಿಕರು ಇನ್ನಷ್ಟು ದರ ಹೆಚ್ಚಳವಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು‌. ಇನ್ನೇನು ನವರಾತ್ರಿ ಹಾಗೂ ದೀಪಾವಳಿ ಹಬ್ಬ ಬರುವುದರಿಂದ ಅಡಕೆಗೆ ಹೆಚ್ಚು ಬೇಡಿಕೆ ಬಂದು ದರ ಕೂಡ ಹೆಚ್ಚಳ ಆಗಬಹುದು ಎಂಬ ಆಸೆ ಇತ್ತು ಎಂದು ರೈತರಿಗೆ.

ಈ ಮಧ್ಯೆ, ದರ ಏರಿಕೆ ಬಿಡಿ, ಏರಿಕೆಯಾದ ದರ ಸ್ಥಿರವಾಗಿರದೇ ಮತ್ತೆ ಇಳಿಮುಖವಾಗಿದೆ. ತೀರಾ ಆಸೆ ಪಟ್ಟ ಬೆಳೆಗಾರರು ಈಗ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.

ಈ ಸಮಯ ಅಡಕೆ ಉತ್ಪಾದನೆ ಮತ್ತು ಮಾರಾಟದ ಹಂಗಾಮು ಅಲ್ಲ. ಆದರೆ ಉತ್ತಮ ದರ ಸಿಗಬಹುದು ಎಂದು ಅನೇಕ ಬೆಳೆಗಾರರು ದಾಸ್ತಾನು ಇಟ್ಟಿದ್ದಾರೆ. ಕೆಂಪಡಕೆ ಶೇ. 10ರಷ್ಟು ಮತ್ತು ಚಾಲಿ ಅಡಕೆ ಶೇ. 40ರಷ್ಟು ದಾಸ್ತಾನು ಇದೆ ಎಂದು ಅಂದಾಜಿಸಲಾಗಿದೆ. ಈ ದಾಸ್ತಾನು ಇಟ್ಟ ರೈತರು ಈಗ ದರ ಮತ್ತೆ ಏರಿಕೆ ಆಗಬಹುದೇ ಇಲ್ಲವೇ ಅಥವಾ ಈಗಲೇ ಮಾರಾಟ ಮಾಡಬೇಕೇ? ಎಂಬ ಗೊಂದಲದಲ್ಲಿದ್ದಾರೆ.

You may also like

Leave a Comment