ಸುಳ್ಯ: ‘ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವುದು’ ಈ ಮಾತಿಗೆ ಸುಳ್ಯದಲ್ಲಿ ಬೆಳಕಿಗೆ ಬಂದ ಅದೊಂದು ಘಟನೆ ಉದಾಹರಣೆಯಂತಿದ್ದು, ಪ್ರಸಕ್ತ ಕಾಲದಲ್ಲಿ ಎಲ್ಲವೂ ಆಧುನಿಕತೆಯತ್ತ ಮುಖ ಮಾಡುತ್ತಿರುವಾಗ ಕಾಗೆಯೂ ಕೂಡಾ ಮಂಡೆ ಖರ್ಚು ಮಾಡಿದೆ. ಈಗ ಕಾಗೆ ಗೂಡೊಂದು ಆಧುನಿಕತೆಯತ್ತ ಸಾಗುತ್ತಿರುವುದನ್ನು ತಿಳಿಸಿ ಹೇಳಿದೆ.
ಹೌದು. ಸುಳ್ಯದಲ್ಲಿ ಬೆಳಕಿಗೆ ಬಂದ ಘಟನೆ ಇದಾಗಿದ್ದು, ಸಾಮಾನ್ಯವಾಗಿ ಕಾಗೆಗಳು ಅಥವಾ ಹಕ್ಕಿಗಳು ತಮ್ಮ ಗೂಡುಗಳನ್ನು ಕಸ ಕಡ್ಡಿಗಳಿಂದ-ತರಗೆಲೆಗಳಿಂದ ತಯಾರಿಸುತ್ತವೆ. ಆದರೆ ಇಲ್ಲಿನ ಕಾಗೆಗಳು ಇದಕ್ಕೆ ತದ್ವಿರುದ್ಧವಾದವು. ಅವು ಬುದ್ದಿವಂತರ ಜಿಲ್ಲೆಯ ಅತಿ ಬುದ್ದಿವಂತ ಕಾಗೆಗಳು. ಈ ಕಾಗೆಗಳು ಸಾಮಾನ್ಯ ಜನರು ಬಳಸುವಂತೆ ತಮ್ಮ ಗೂಡುಗಳಿಗೆ ಕಬ್ಬಿಣದ ಸ್ವತ್ತುಗಳನ್ನು ಬಳಸಿ ಗೂಡು ಗಟ್ಟಿಗೊಳಿಸಿದೆ. ತನ್ನ ಇಂಜಿನಿಯರಿಂಗ್ ಬುದ್ದಿ ಬಳಸಿ ಮನೆ ನಿರ್ಮಿಸಿದೆ ಆ ತಂತ್ರಗಾತಿ ಕಾಗೆ.
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ಆವರಣದಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದ್ದು, ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ನೋಡುಗರಿಗೆ ಕುತೂಹಲದ ಜೊತೆಗೆ ಅಚ್ಚರಿ ಕಾದಿತ್ತು. ಸೆಂಟ್ರಿಂಗ್ ಕಾಮಗಾರಿಗೆ ಬಳಸುವಂತಹ ಸಣ್ಣ ಸಣ್ಣ ಕಬ್ಬಿಣದ ತಂತಿಗಳಿಂದಲೇ ಈ ಗೂಡು ತಯಾರಾಗಿದ್ದು, ಗೂಡನ್ನು ನೋಡಲು ಜನಸಂದಣಿಯಾವುದನ್ನು ಕಂಡ ಕಾಗೆಗಳು ತಾವೂ ಯಾವುದಕ್ಕೂ ಕಮ್ಮಿ ಇಲ್ಲ ಎಂದು ಜಂಭದಿಂದ ಬೀಗುತ್ತಿವೆ. ಕಾಗೆಗಳು ನಮಗೆ ಗೊತ್ತಿರುವಂತೆ ಬುದ್ದಿವಂತ ಜೀವಿಗಳು. ವಯಸ್ಕ ಕಾಗೆಗಳಿಗೆ 7 ವರ್ಷದ ಹುಡುಗರಿಗೆ ಇರುವ ಬುದ್ದಿವಂತಿಕೆ ಇದೆ. ಕಾಗೆಗಳು ಮನುಷ್ಯನ ಮುಖ ಗುರುತು ಹಿಡಿ ಯಬಲ್ಲವು.
