ಮಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆ ನಡೆಯುತ್ತಿದೆ. ಇದು ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ಪ್ಲಾನ್ ನಡೆದಿತ್ತಾ?
ಇದೀಗ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಸಿಸಿಬಿ ಮತ್ತು ಮೇಟಗಳ್ಳಿ ಠಾಣೆ ಪೊಲೀಸರು ಮೈಸೂರು ನಗರದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಮಂಗಳೂರು ಮೂಲದ ಇಬ್ಬರನ್ನು, ಮೈಸೂರು ಲೋಕನಾಯಕ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಇಬ್ಬರನ್ನು ನಾಗುರಿ ರಿಕ್ಷಾ ಘಟನೆಗೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ಪೊಲೀಸರು ತಂಡವು ಮೈಸೂರಿಗೆ ಬಂದಿದ್ದು, ಶಂಕಿತ ಭಯೋತ್ಪಾದಕನಿಗೆ ಮೊಬೈಲ್ ನೀಡಿದ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದು, ಇಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ಉಗ್ರನ ಸ್ನೇಹಿತನನ್ನು ವಶಕ್ಕೆ ಪಡೆದಿದೆ. 10 ಕ್ಕೂ ಹೆಚ್ಚು ಮೊಬೈಲ್ ಗಳನ್ನು ಆತ ಶಂಕಿತ ಉಗ್ರನಿಗೆ ನೀಡಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರ ತಂಡ ವಿಚಾರಣೆ ನಡೆಸುತ್ತಿದೆ.
ಮಂಗಳೂರಿನ ನಾಗುರಿಯಲ್ಲಿ ನಡೆದ ಆಟೋರಿಕ್ಷಾ ಸ್ಫೋಟದ ಹಿಂದೆ ಉಗ್ರರ ಕೈವಾಡವಿದೆ ಎಂದು ಡಿಜಿಪಿ ಪ್ರವೀಣ್ ಸೂದ್ (DGP Praveen Sood) ಖಚಿತಪಡಿಸಿದ್ದಾರೆ. ಎನ್ಐಎ (NIA Team) ಐದು ತಂಡಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸ್ಫೋಟಗೊಂಡ ಸ್ಥಳದಲ್ಲಿಯೇ ಆಟೋ ತಂದು ನಿಲ್ಲಿಸಿ, ಪೆಂಡಾಲ್ನಿಂದ ಮರೆ ಮಾಡಲಾಗಿದೆ.
ಸ್ಪೋಟಗೊಂಡ ಸ್ಥಳಕ್ಕೆ ಸಾರ್ವಜನಿಕರ ವೀಕ್ಷಣೆಗೆ ನಿರ್ಬಂಧ ಹಾಕಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. ಈ ಮಧ್ಯೆ ಉಗ್ರರು ಮಂಗಳೂರು ನಗರದಲ್ಲಿಯೇ ಸ್ಫೋಟಕ್ಕೆ ಸಂಚು ರೂಪಿಸಿದ್ದರಾ? ಅನ್ನೋ ಅನುಮಾನಗಳು ಉಂಟಾಗಿದೆ. ಟಾರ್ಗೆಟ್ ಮಾಡಿದ್ದ ಸ್ಥಳಕ್ಕೆ ತಲುಪುವ ಮೊದಲೇ ಮಾರ್ಗ ಮಧ್ಯೆದಲ್ಲಿಯೇ ಬಾಂಬ್ ಸ್ಫೋಟವಾಗಿದೆ ಎನ್ನಲಾಗಿದೆ.
ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಶನಿವಾರ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಮಂಗಳೂರಿನ ಸಂಘನಿಕೇತನದಲ್ಲೂ ಕನ್ನಡ ಶಾಲಾ ಮಕ್ಕಳ ಹಬ್ಬದ ಪ್ರಯುಕ್ತ 15 ಸಾವಿರಕ್ಕೂ ಅಧಿಕ ಮಕ್ಕಳು ಸೇರಿದ್ದರು. ಸದ್ಯ ಇಂದು ಮಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಇನ್ನು, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ , ಗಾಯಗೊಂಡಿರುವ ಪ್ರಯಾಣಿಕ ಪ್ರೇಮ್ ರಾಜ್ ಕೊಣಗಿ ಕೊಯಂಬತ್ತೂರಿನವನು ಎಂದು ತಿಳಿದು ಬಂದಿದೆ. ಆದರೆ ಆಟೋದಲ್ಲಿ ಪತ್ತೆಯಾಗಿರುವ ಆತನ ಆಧಾರ್ ಕಾರ್ಡ್ನಲ್ಲಿ ಪ್ರೇಮ್ರಾಜ್ ಹುಬ್ಬಳ್ಳಿಯ ನಿವಾಸಿ ಎಂದು ದಾಖಲಾಗಿತ್ತು. ಇದರಿಂದ ಈತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಮಂಗಳೂರಿಗೆ ಬಂದಿದ್ದಾನೆ ಅನ್ನೋ ಅನುಮಾನ ಉಂಟಾಗಿದೆ.
ಮೈಸೂರು ಮಾರ್ಗವಾಗಿ ಮಂಗಳೂರು ತಲುಪಿದ ಪ್ರೇಮ್ ರಾಜ್ ರೈಲಿನಿಂದ ಇಳಿದು ಬೇರೆ ಕಡೆ ಹೋಗಲು ಆಟೋ ರಿಕ್ಷಾದಲ್ಲಿ ಹೊರಟಿದ್ದನು. ಆದರೆ ಮಾರ್ಗ ಮಧ್ಯೆ ನಾಗುರಿ ಬಳಿ ಆಟೋದಲ್ಲಿ ಸ್ಫೋಟ ಉಂಟಾಗಿದೆ. ಸ್ಫೋಟದ ತೀವ್ರತೆಗೆ ಪ್ರೇಮ್ರಾಜ್ ನ ದೇಹದ ಅರ್ಧ ಭಾಗ ಸುಟ್ಟು ಕರಕಲಾಗಿದೆ. ಹಾಗೂ ಆಟೋ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯಾದ್ಯಂತ ಸೂಕ್ಷ್ಮ ಹಾಗೂ ಜನನಿಬಿಡ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಂದ ರಾಜ್ಯದ ಎಲ್ಲಾ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ. ರೈಲ್ವೆ ಸ್ಟೇಷನ್, ಮಾರ್ಕೆಟ್, ಬಸ್ ನಿಲ್ದಾಣಗಳು, ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳು ಸೇರಿದಂತೆ ಹಲವು ಕಡೆಗಳಲ್ಲಿ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಲಾಗಿದೆ.
ಹಾಗೇ ಮಂಗಳೂರಿನ ಜನಸಂದಣಿ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಘಟನೆ ನಡೆದ ಸ್ಥಳದ ಸುತ್ತಲಿನ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಮಂಗಳೂರಿನ ಮಾರುಕಟ್ಟೆ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ದಲ್ಲಿ ಪೊಲೀಸರ ಭದ್ರ ಕಾವಲಿದೆ.
ಇನ್ನು ಈ ಸ್ಫೋಟಗೊಂಡಿರುವ ಆಟೋ ರಿಕ್ಷಾದ ಒಳಗೆ ಕುಕ್ಕರ್ ನ ಒಳಗೆ ತಯಾರಿಸುವ ಬಾಂಬ್ ಮಾದರಿ ವಸ್ತು ಪತ್ತೆಯಾಗಿದೆ. ಕುಕ್ಕರ್ ಒಳಭಾಗದಲ್ಲಿ ಮ್ಯಾಟ್ ಮಾದರಿಯ ವಸ್ತು ಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ. ನಾಲ್ಕು ಡ್ಯೂರೆಸೆಲ್ ಬ್ಯಾಟರಿ, ಸರ್ಕೀಟ್ ಮಾದರಿಯ ವೈರ್ ಸೇರಿದಂತೆ ಬ್ಲಾಸ್ಟ್ಗೆ ಬೇಕಾದ ಸಾಧನೆಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
