ಸಾಮಾನ್ಯವಾಗಿ ಪ್ರಾಣಿಗಳಿಗೆ ಬಾಲ ಇರುವುದು ಎಲ್ಲರಿಗೂ ತಿಳಿದಿದೆ. ಹಾಗೇ ಕೆಲವೊಮ್ಮೆ ತಮಾಷೆಗೆ ಮಂಗನ ಬಾಲದ ಬಗ್ಗೆ ಆಡಿಕೊಂಡದ್ದೂ ಇರುತ್ತದೆ. ಆದರೆ ಮನುಷ್ಯನಿಗೆ ಬಾಲ ಅಂದರೆ ನಂಬುತ್ತೀರಾ!! ಮಗುವೊಂದು ಬಾಲದೊಂದಿಗೆ ಜನಿಸಿದೆ ಎಂದರೆ ಕೇಳಲು ಆಶ್ಚರ್ಯವೆನಿಸುತ್ತದೆ ಅಲ್ವಾ!! ಆದರೆ ಇದು ಸತ್ಯ. ಮೆಕ್ಸಿಕೋದಲ್ಲಿ ಈ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ನ್ಯೂವೋ ಲಿಯಾನ್ ಎಂಬ ಆಸ್ಪತ್ರೆಯಲ್ಲಿ ಹೆಣ್ಣು ಮಗುವೊಂದರ ಜನನವಾದಾಗ ಆ ಮಗುವಿಗೆ ಬಾಲ ಇರುವುದು ತಿಳಿದುಬಂದಿದೆ. ಈ ಬಾಲದಲ್ಲಿ ಕೂದಲು ತುಂಬಿಕೊಂಡಿದ್ದು, 2 ಇಂಚು ಅಂದರೆ 5.7 ಸೆಂ.ಮೀಟರ್ ಉದ್ದವಿದ್ದು ಮೃದುವಾಗಿತ್ತು. ಹಾಗೂ ಬಾಲ ತುದಿಯ ಕಡೆಗೆ ಕಿರಿದಾಗುತ್ತಾ ವ್ಯಾಸದಲ್ಲಿ 3 ಎಂಎಂ ಮತ್ತು 5 ಎಂಎಂ ನಡುವೆ ಇತ್ತು. ನಂತರ ಶಸ್ತ್ರಚಿಕಿತ್ಸೆ ಮಾಡಿ ಆ ಬಾಲವನ್ನು ಬೇರ್ಪಡಿಸಲಾಯಿತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ.
ಇದು ಸುಳ್ಳಲ್ಲ. ಸ್ನಾಯು, ರಕ್ತನಾಳ ಮತ್ತು ನರಗಳನ್ನು ಒಳಗೊಂಡಿರುವ ನಿಜವಾದ ಬಾಲವಾಗಿತ್ತು. ಬಾಲದಲ್ಲಿ ಯಾವುದೇ ಮೂಳೆಗಳಿರಲಿಲ್ಲ. ಕಾರಣ ಗರ್ಭಾಶಯದಲ್ಲಿ ಬೆಳವಣಿಗೆಯಾಗುವಾಗ ಭ್ರೂಣದ ಬಾಲದಿಂದ ಬಾಲವು ಹೊರಹೊಮ್ಮಿದೆ ಎಂದು ಭಾವಿಸಲಾಗಿದೆ. ಆದರೆ ಮೂಳೆಯನ್ನು ರೂಪಿಸಲು ದೇಹ ಭ್ರೂಣದ ಬಾಲವನ್ನು ಒಳಗೆ ಎಳೆದುಕೊಳ್ಳುತ್ತದೆ. ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೂ ಮೆಕ್ಸಿಕೊದಲ್ಲಿ ಈ ರೀತಿಯ ಅಪರೂಪದ,ವಿಸ್ಮಯಕಾರಿ ಪ್ರಕರಣ ಇದೇ ಮೊದಲು. ಆದರೆ ಪ್ರಪಂಚದಲ್ಲಿ 200ಕ್ಕಿಂತ ಕಡಿಮೆ ಬಾರಿ ಈ ರೀತಿಯ ಪ್ರಕರಣ ದಾಖಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಿಜಕ್ಕೂ ಇದು ಆಶ್ಚರ್ಯದ ಸಂಗತಿ ಎನ್ನಬಹುದು.
