ಮದುವೆ ಎಂಬ ಸುಂದರ ಬೆಸುಗೆಗೆ ಹೊಂದಾಣಿಕೆಯ ಜೊತೆಗೆ ಪ್ರೀತಿ ಬೆರೆತರೆ ಸುಂದರ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯಲು ಸಾಧ್ಯ!! ಆದರೆ, ಇಂದು ಮುಂಚಿನಂತೆ ಹೊಂದಿಕೊಂಡು ಹೋಗುವ ತಾಳ್ಮೆ, ವ್ಯವಾಧಾನ ಹೆಚ್ಚಿನವರಿಗೆ ಇಲ್ಲ!! ಅಷ್ಟೇ ಏಕೆ ಸಣ್ಣ ಪುಟ್ಟ ವಿಚಾರಕ್ಕೂ ಕ್ಯಾತೆ ತೆಗೆದು ಮದುವೆ ಮಂಟಪವನ್ನೇ ಕುರುಕ್ಷೇತ್ರ ಪ್ರಹಸನ ಮಾಡುವ ಪ್ರಸಂಗಗಳು ಹೆಚ್ಚಾಗಿ ನಡೆಯುತ್ತಿವೆ. ಈ ನಡುವೆ ಸಿನಿಮೀಯ ಮಾದರಿಯಲ್ಲಿ ಹಸೆಮಣೆ ಏರುವ ಸಂದರ್ಭದಲ್ಲಿ ವರನ ಅಸಲಿ ನಾಟಕ ಕಳಚಿ ಮದುವೆ ನಿಂತ ಘಟನೆಯೊಂದು ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಹಳೆ ಕಾಲದ ಸಿನಿಮಾದಲ್ಲಿ (old Cinema) ಹೀರೋ ಇಲ್ಲವೇ ಹೀರೋ ಯಿನ್ ಮದುವೆ ನಡೆಯುತ್ತಿದ್ದಾಗ ಇನ್ನೇನು ವರ ತಾಳಿ ಕಟ್ಟಿ ಮಾಂಗಲ್ಯಂ ತಂತುನಾನೇನ. ಎಂದು ಗಟ್ಟಿಮೇಳ ಮೊಳಗುವಷ್ಟರಲ್ಲಿ (Actress Marriage) ಮತ್ತೊಬ್ಬ ಎಂಟ್ರಿ ಕೊಟ್ಟು, ಸಿನಿಮೀಯ ಮಾದರಿಯಲ್ಲಿ ಈ ಮದುವೆ ನಡೆಯಲ್ಲ!!! ಎಂದು ಘೋಷಣೆ ಮಾಡಿ ಪೋಲಿಸರ ಜೊತೆಗೆ ಹಸೆಮಣೆ ಏರಿದ್ದ ವರನನ್ನು ಎಳೆದುಕೊಂಡು ಹೋಗುವ ಆಗ ಮದುವೆ ಮಂಟಪದ ಹೆಣ್ಣಿನ ಕಡೆಯವರು ಮೂಕ ಪ್ರೇಕ್ಷಕರಾಗಿ ಅಚ್ಚರಿ ಪಟ್ಟು ಕಣ್ಣೀರ ಕಡಲಲ್ಲಿ ತೇಲುವ ದೃಶ್ಯಗಳನ್ನು ಅದೆಷ್ಟೋ ಸಿನಿಮಾಗಳಲ್ಲಿ ನೋಡಿರುತ್ತೇವೆ.
ಹೌದು, ಇದೇ ರೀತಿಯ ಸಿನಿಮಾ ಮಾದರಿಯ ಘಟನೆಯೊಂದು ನಿಜ ಜೀವನದಲ್ಲಿ ನಡೆದಿದ್ದು, ವರನ ಅಸಲಿ ನಾಟಕ ಬಯಲಾಗಿದೆ. ಪ್ರೀತಿ ಕುರುಡು ಎಂಬ ಮಾತಿನಂತೆ…ಯಾರನ್ನೋ ಪ್ರೀತಿಸಿ ಮತ್ತಾರನ್ನೋ ಮದುವೆಯಾಗಿ, ಇಬ್ಬರ ಜೀವನವನ್ನು ಮುಳ್ಳಿನ ಹಾದಿಯಲ್ಲಿ ತುಳಿಯುವಂತೆ ಮಾಡುವ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಮದುವೆ ಎಂದರೆ ಅದೊಂದು ಸುಂದರ ಬೆಸುಗೆಗೆ ನಾಂದಿ ಹಾಡುವ ಘಟ್ಟ.. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಯ ಅರ್ಥವನ್ನೇ ಪ್ರಶ್ನಿಸುವ ಸ್ಥಿತಿ ನಿರ್ಮಾಣವಾಗಿದೆ. ಸಣ್ಣ ಪುಟ್ಟ ವಿಚಾರಕ್ಕೂ ತಗಾದೆ ತೆಗೆದು ಮದುವೆ ನಿಲ್ಲಿಸುವ ಅನೇಕ ಘಟನೆಗಳು ನಡೆಯುತ್ತಿವೆ.
ಈ ನಡುವೆ ವರನ ಪ್ರೇಯಸಿ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಮೊಹಾಲಿಯಲ್ಲಿ ವರನ ಮದುವೆ ನಡೆಯುತ್ತಿದ್ದ ಮಂಟಪಕ್ಕೆ ಬಂದು ದೊಡ್ಡ ರಾದ್ದಾಂತವನ್ನೇ ಮಾಡಿದ್ದು, ಈ ಪ್ರಹಸನದ ಬಳಿಕ ವಧು ಈ ಮದುವೆಯೇ ಬೇಡವೆಂದು ಮದುವೆ ನಿಲ್ಲಿಸಿದ ಘಟನೆ ನಡೆದಿದೆ.ಪಟಿಯಾಲ ಮೂಲದ ಮಹಿಳೆಯೊಬ್ಬರು ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದು, ಹಸೆಮಣೆ ಏರಿದ್ದ ವರ ತನ್ನನ್ನು ಮದುವೆಯಾಗುವುದಾಗಿ ಹೇಳಿ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಅಷ್ಟೆ ಅಲ್ಲದೆ ಕಳೆದ ಎಂಟು ವರ್ಷಗಳಿಂದ ಜೊತೆಯಾಗಿ ಜೀವಿಸುತ್ತಿದ್ದ ಕುರಿತು ಕೂಡ ಮಹಿಳೆ ಹೇಳಿಕೊಂಡಿದ್ದಾಳೆ.
ವರನ ಪ್ರೇಯಸಿ ಎಂದು ಹೇಳಿಕೊಂಡ ಮಹಿಳೆ, ತಾನು ಈಗಾಗಲೇ ತನ್ನ ಪತಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಜೊತೆಗೆ ಇಲ್ಲಿ ಮದುವೆಯಾಗುತ್ತಿರುವ ವರ ಬಹಳ ಸಮಯದಿಂದ ತನ್ನೊಂದಿಗೆ ಜೀವನ ನಡೆಸುತ್ತಿದ್ದು ಅಷ್ಟೇ ಅಲ್ಲದೆ, ಈ ವರ ತನ್ನ ಮಕ್ಕಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಸಹ ಬೆಳೆಸಿಕೊಂಡಿರುವ ಕುರಿತು ವರನ ಮೇಲೆ ಆರೋಪ ಮಾಡಿದ್ದು, ಇದೆಲ್ಲದರ ಹೊರತಾಗಿ, ತನ್ನ ಪ್ರಿಯತಮ ಬೇರೆ ಯುವತಿಯೊಂದಿಗೆ ಮದುವೆಯಾಗುವ ಕುರಿತಾಗಿ ತನಗೆ ತಿಳಿಸಿಲ್ಲ ಎಂಬುದಾಗಿ ದೋಷಾರೋಪ ಮಾಡಿದ್ದಾಳೆ.
ಈ ನಡುವೆ, ವರ ಕೂಡ ಮಹಿಳೆಯ ವಿರುದ್ದ ಪ್ರತ್ಯಾರೋಪ ಮಾಡಿದ್ದು, ಮಹಿಳೆ ತನ್ನ ವೈವಾಹಿಕ ಜೀವನದ ಬಗ್ಗೆ ರಹಸ್ಯ ಕಾಯ್ದುಕೊಂಡು ಕೆಲ ಸತ್ಯಗಳನ್ನು ತನ್ನಿಂದ ಮುಚ್ಚಿಟ್ಟಿದ್ದು, “ಆಕೆ ಇನ್ನೂ ತನ್ನ ಮೊದಲನೇ ಗಂಡನಿಗೆ ವಿಚ್ಛೇದನ ನೀಡಿಲ್ಲ ಎಂಬುದು ತನಗೆ ತಿಳಿಸಿಲ್ಲ ಅಲ್ಲದೆ, ಆಕೆಯು ತನಗೆ ಮೋಸ ಮಾಡಿದ್ದು ಹೀಗಾಗಿ ತಾನು ಬೇರೊಬ್ಬರನ್ನು ಮದುವೆಯಾಗಲು ತೀರ್ಮಾನಿಸಿರುವ ಕುರಿತು ವರ ಹೇಳಿ ಕೊಂಡಿದ್ದಾನೆ.
ಈ ಎಲ್ಲ ನಾಟಕ ಪ್ರಹಸನಕ್ಕೆ ಸಾಕ್ಷಿಯಾಗಿದ್ದ ವಧುವಿನ ಕುಟುಂಬವು ಈ ವಿಷಯ ಅರಿವಿಗೆ ಬರುತ್ತಿದ್ದಂತೆ, ಮದುವೆಯನ್ನು ರದ್ದುಗೊಳಿಸಿದ್ದು, ಈ ಬಳಿಕ ಮದುವೆಯ ಸಮಾರಂಭದ ಖರ್ಚು ವೆಚ್ಚಗಳ ಭರಿಸುವಂತೆ ವರನಿಗೆ ಆದೇಶಿಸಿದ್ದಾರೆ. ಅಲ್ಲದೆ, ವಧು ಈ ಕುರಿತು ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದು, ಅವರು ಸ್ಥಳಕ್ಕೆ ಬಂದು ಸಿರ್ಹಿಂದ್ ನಿವಾಸಿ ವರನನ್ನು ಮತೌರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೋಲೀಸರು ಈ ಕುರಿತು ವಿಚಾರಣೆ ನಡೆಸುತ್ತಿದ್ದು, ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
