ಕಾರು ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿ, ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೊಂಡ್ಲಿಕ್ರಾಸ್ ಸಮೀಪ ನಡೆದಿದೆ. ಅಪಘಾತ ಸಂಭವಿಸಿದ್ದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವಿಗೀಡಾಗಿದ್ದು, ಗಂಭೀರ ಗಾಯಗೊಂಡಿದ್ದ ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅಪಘಾತದ ಭೀಕರತೆಗೆ ಕಾರು ಮತ್ತು ಕ್ಯಾಂಟರ್ ನಡುವೆ ನಡೆದ ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ತಂದೆ, ತಾಯಿ ಮಗ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.
ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವನಹಳ್ಳಿಯವರು ತಂದೆ ನಾರಾಯಣಪ್ಪ (51) ತಾಯಿ ನಾಗರತ್ನ (45) ಮಗ ಸಾಗರ್ (21) ಹಾಗೂ ರಾಮಣ್ಣ (60) ಎಂದು ಗುರುತಿಸಲಾಗಿದೆ. ಇಂಡಿಕಾ ಕಾರ್ ಕೆಬಿ ಕ್ರಾಸ್ ನಿಂದ ತುಮಕೂರು ಕಡೆ ಪ್ರಯಾಣಿಸುವಾಗ ಮುಖಾಮುಖಿ ಡಿಕ್ಕಿಯಾಗಿದೆ. ಕ್ಯಾಂಟರ್ ಲಾರಿ ಓವರ್ ಟೇಕ್ ಮಾಡಲು ಹೋಗಿ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದೆ. ಒಂದೇ ಗ್ರಾಮದ ನಾಲ್ವರು ಹಾಗೂ ಕಾರಿನಲ್ಲಿದ್ದ ನಾಯಿ ಕೂಡ ಸಾವನ್ನಪ್ಪಿದೆ. ಈ ಘಟನೆ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
