ಪೂರ್ವಜರ ಕಾಲದಿಂದಲೂ ಬರವಣಿಗೆ ಎಂಬುದು ರೂಢಿಯಲ್ಲಿದೆ. ಮನುಷ್ಯರು ತಮ್ಮ ಮನಸ್ಸಿನ ಭಾವನೆಯನ್ನು ಅಕ್ಷರದ ರೂಪದಲ್ಲಿ ಬರೆಯುತ್ತಾರೆ. ಹಿಂದೆಲ್ಲಾ ಕಲ್ಲು, ತಾಳೆಗರಿಯಲ್ಲಿ ಬರೆಯಲಾಗುತ್ತಿತ್ತು. ನಂತರದ ಆವಿಷ್ಕಾರದಲ್ಲಿ ಕಾಗದದ ಬಳಕೆ ಬಂತು. ಜನರು ಮಸಿ, ಪೆನ್ಸಿಲ್, ಪೆನ್ನನ್ನು ಬಳಸಿ ಪೇಪರ್‌ನಲ್ಲಿ ಬರೆಯೋಕೆ ಶುರು ಮಾಡಿದರು. ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆ ಕಂಪ್ಯೂಟರ್, ಮೊಬೈಲ್, ಟ್ಯಾಬ್ ಮೊದಲಾದ ಸಾಧನಗಳು ಬಂದವು. ಈಗ ಜನರು ಪೆನ್ ಬಳಸಿಕೊಂಡು ಬರೆಯುವುದು ಕಡಿಮೆಯಾಗಿದೆ. ಹೀಗಾಗಿ ಹ್ಯಾಂಡ್ ರೈಟಿಂಗ್ ಸಹ ಕಾಣಸಿಗುವುದು ವಿರಳ. ಆದರೆ ನಿಮಗೆ ತಿಳಿದಿದೆಯೇ? ಈ ಕೈಬರಹ ನಿಮ್ಮ ಆರೋಗ್ಯದ ಬಗ್ಗೆ ಹೇಳುತ್ತದೆ ಎಂದು. ಈ ಕುತೂಹಲ ಮಾಹಿತಿ ಇಲ್ಲಿದೆ.
ಗ್ರಾಫಾಲಜಿಯ ಮೂಲಕ ನೀವು ಅನುಭವಿಸುತ್ತಿರುವ ಯಾವುದೇ ಕಾಯಿಲೆಗಳ ಬಗ್ಗೆ ನಿಮ್ಮ ಕೈಬರಹವು ಏನು ಹೇಳುತ್ತದೆ ಎಂಬುವುದರ ಕುರಿತು ಸರಿಯಾದ ಜ್ಞಾನದೊಂದಿಗೆ ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಅರ್ಥೈಸಿಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೈ ಬರಹವು ವ್ಯಕ್ತಿಯ ಬಗ್ಗೆ ಮತ್ತು ಮುಖ್ಯವಾಗಿ ಅವರ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ. ಒಬ್ಬ ವ್ಯಕ್ತಿಯು ಕಾಯಿಲೆಗಳಿಗೆ ಒಳಗಾಗಿದ್ದರೆ ಅವರ ಕೈಬರಹದಲ್ಲಾಗುವ ಬದಲಾವಣೆಗಳನ್ನು ಕಾಣಬಹುದು ಎಂದು ಅಧ್ಯಯನಗಳು ತೀರ್ಮಾನಿಸಿವೆ. ಸಹಿಯ ಶೈಲಿಯಲ್ಲಿ ಅಥವಾ ಅವರು ಬರೆಯುವ ರೀತಿಯಲ್ಲಿ ಬದಲಾವಣೆಯಾಗಿದ್ದರೆ, ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ ಅಥವಾ ತಮ್ಮ ಕೈಬರಹವನ್ನು ಡಿಕೋಡ್ ಮಾಡಲು ಸಹಾಯ ಮಾಡುವ ಪರಿಣಿತರನ್ನು ಕಂಡುಹಿಡಿಯಬೇಕು. ಗ್ರಾಫಲಜಿ ಅನೇಕ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ಬಹಿರಂಗ ಪಡಿಸುತ್ತದೆ.
ನಮ್ಮ ಕೈ ಬರಹವು ಬಹಳಷ್ಟು ನಿಂತಿರುವ ರೇಖೆಗಳನ್ನು ಒಳಗೊಂಡಿದೆ ಮತ್ತು ಅದು ನಮ್ಮ ಭಂಗಿ ಮತ್ತು ಬೆನ್ನೆಲುಬು-ಸಂಬಂಧಿತ ಸಮಸ್ಯೆಗಳ ಬಗ್ಗೆಯು ಹೇಳುತ್ತದೆ. ನಿಂತಿರುವ ರೇಖೆಗಳು ಅಲುಗಾಡುತ್ತಿದ್ದರೆ ಅಥವಾ ಅಲೆ ಅಲೆಯಾಗಿದ್ದರೆ, ಅದು ಬೆನ್ನೆಲುಬಿಗೆ ಸಂಬಂಧಿತ ಸಮಸ್ಯೆಗಳ ಕಡೆಗೆ ಸುಳಿವು ನೀಡುತ್ತದೆ.
ಹಾಗೆಯೇ ಶಾಯಿ ಹರಿವು ಪಾಸ್ಟೊಸಿಟಿಯ ಬಗ್ಗೆ ಹೇಳುತ್ತದೆ.ಪಾಸ್ಟೊಸಿಟಿಯಲ್ಲೂ ಋಣಾತ್ಮಕ ಹಾಗೂ ಧನಾತ್ಮಕ ಎಂಬ ಎರಡು ವಿಧಗಳಿವೆ. ಸಕಾರತ್ಮಕ ಪಾಸ್ಟೊಸಿಟಿ ಹೊಂದಿರುವವರಿಗೆ ಸಂಗೀತ, ಆಹಾರ ಮತ್ತು ಉಡುಪುಗಳ ಬಗ್ಗೆ ಹೆಚ್ಚಿನ ಒಲವು ಇರುತ್ತದೆ. ಹಾಗೂ ಇವರು ದಪ್ಪ ಪೆನ್ನನ್ನು ಬಳಸುತ್ತಾರೆ ಮತ್ತು ಬರವಣಿಗೆಯಲ್ಲಿ ಸೃಜನಶೀಲರಾಗಿರುತ್ತಾರೆ. ಋಣಾತ್ಮಕ ಪಾಸ್ಟೊಸಿಟಿ ಹೊಂದಿರುವ ಜನರು ಬರವಣಿಗೆಯ ಮೇಲೆ ಬಹಳಷ್ಟು ತಿದ್ದಿ ಬರೆಯುತ್ತಾರೆ. ಇದು ಹಿಂಸಾತ್ಮಕ ಅಥವಾ ಋಣಾತ್ಮಕ ಗ್ರಾಫಿಕ್ ಚಲನಚಿತ್ರಗಳಿಂದ ಪ್ರಚೋದಿಸ್ಪಡುತ್ತದೆ. ಇವರು ಸಾಮಾನ್ಯವಾಗಿ ಒಬ್ಬಂಟಿಯಾಗಿ, ನೋವಿನಲ್ಲಿ ಇರಲು ಇಷ್ಟಪಡುತ್ತಾರೆ. ಇದು ವ್ಯಕ್ತಿಯ ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರಬಹುದು.
ಸ್ಕ್ವೀಗಿಂಗ್ ಎಲಿಮೆಂಟ್ ಎಂದರೆ ಒಬ್ಬ ವ್ಯಕ್ತಿಯ ಅಕ್ಷರಗಳನ್ನು ಹತ್ತಿರದಿಂದ ಇಕ್ಕಟ್ಟಾಗಿಸುವ ಮೂಲಕ ಅಥವಾ ಸಾಮಾನ್ಯಕ್ಕಿಂತ ಹೆಚ್ಚಾಗಿ ಅವುಗಳನ್ನು ಪರಸ್ಪರ ಬೇರ್ಪಡಿಸಿ ಬರೆಯುವ ಮೂಲಕ ಅಥವಾ ವಿಕಾರ ಅಕ್ಷರಗಳನ್ನು ಬಳಸುವುದರ ಮೂಲಕ ಬರೆಯುತ್ತಾರೆ. ಇದು ವ್ಯಕ್ತಿಯ ಆರೋಗ್ಯದ ಸಮಸ್ಯೆಯ ಬಗ್ಗೆ ಹೇಳುತ್ತದೆ.
ಇನ್ನು ಬರವಣಿಗೆಯಲ್ಲಿನ ವಿವಿಧ ವೇಗವು ವ್ಯಕ್ತಿಯ ಮಾನಸಿಕ ಸಮತೋಲನದ ಬಗ್ಗೆ ಪ್ರತಿಬಿಂಬಿಸುತ್ತದೆ. ಒಬ್ಬ ವ್ಯಕ್ತಿಯು ತುಂಬಾ ವೇಗವಾಗಿ ಬರೆದರೆ, ಅವರು ಸಾಮಾನ್ಯವಾಗಿ ಕ್ಲಬ್ ಸ್ಟ್ರೋಕ್ ರಚನೆಯನ್ನು ಅಥವಾ ಅವರ ವಾಕ್ಯದ ಅತ್ಯಂತ ತೀಕ್ಷ್ಣವಾದ ಸ್ಲ್ಯಾಷ್‍ನ್ನು ಬಿಡುತ್ತಾರೆ. ಇದನ್ನು ಪೆನ್ ಫ್ಲಿಕ್ಸ್ ಎಂದು ಕರೆಯಲಾಗುತ್ತದೆ. ಯಾರಾದರೂ ಅವುಗಳನ್ನು ಆಗಾಗ್ಗೆ ಬಳಸುತ್ತಿದ್ದರೆ ಇದು ಗಂಟಲು, ಕಾಲುಗಳು, ಅಥವಾ ಶ್ವಾಸಕೋಶಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ವಿಕಾರವಾದ ಅಕ್ಷರಗಳು ಸ್ಪಾಸ್ಟಿಸಿಟಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಒಬ್ಬ ವ್ಯಕ್ತಿ ತಮ್ಮ ಕೈ ಬರಹದ ಸ್ವಯಂ ಪರೀಕ್ಷೆಯನ್ನು ಅಭ್ಯಾಸ ಮಾಡಲು ಹಾಗೂ ಕೈಬರಹ ವ್ಯಾಯಾಮಗಳನ್ನು ಅಭ್ಯಾಸ ಮಾಡಲು, ಕೈಬರಹದ ಮೂಲಕ ಯೋಗಕ್ಷೇಮವನ್ನು ಸುಧಾರಿಸಲು ಮಾರ್ಗದರ್ಶನ ಪಡೆಯಲು ಗ್ರಾಫಾಲಜಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ.
