ಪ್ರೀತಿ ಎಂಬ ನವಿರಾದ ಭಾವಕ್ಕೆ ನಂಬಿಕೆ ಅತ್ಯವಶ್ಯಕ. ನೈಜ ಪ್ರೀತಿ ಬಣ್ಣ ಧರ್ಮದ ಎಲ್ಲೆಯ ಗಡಿ ದಾಟಿ ಸ್ವಚ್ಚಂದ ಹಕ್ಕಿಯಂತೆ ಪ್ರೇಮಿಸಿ ಮದುವೆ ಎಂಬ ಬಂಧಕ್ಕೆ ಮುನ್ನುಡಿ ಬರೆಯುವುದು ಸಹಜ. ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಪ್ರೀತಿ ಪ್ರೇಮ ಪ್ರಣಯ ಎಂದು ನಾಲ್ಕು ದಿನ ಅಲೆದಾಡಿ ಮತ್ತೆ ನಾನೊಂದು ತೀರ.. ನೀನೊಂದು ತೀರ ಎನ್ನುವ ಪ್ರಮೇಯದವರು ಇದ್ದರೂ ಕೂಡ ನೈಜ ಪ್ರೀತಿ ಇನ್ನು ಜೀವಂತವಾಗಿವೆ ಎನ್ನುವುದನ್ನು ಪುಷ್ಟಿಕರಿಸುವ ಘಟನೆ ಬೆಳಕಿಗೆ ಬಂದಿದೆ.
ನಮ್ಮ ದೇಶದ ಸಂಸ್ಕೃತಿ ಆಚರಣೆಯ ಮೇಲೆ ವಿದೇಶಿಗರಿಗೆ ಹೆಚ್ಚು ಒಲವು ಅನ್ನೋದು ಗೊತ್ತಿರುವ ವಿಚಾರವೇ!!! ಇದೀಗ, ತಾನು ಪ್ರೀತಿಸಿದ ಯುವಕನನ್ನು ವರಿಸಲು ಸ್ವೀಡನ್‌ನ ಬೆಡಗಿ ಭಾರತಕ್ಕೆ ಲ್ಯಾಂಡ್ ಆಗಿದ್ದಾಳೆ. 2012 ರಲ್ಲಿ ಸ್ವೀಡಿಷ್ ಕ್ರಿಸ್ಟನ್ ಲೀಬರ್ಟ್ ಎಂಬಾಕೆ ಫೇಸ್‌ಬುಕ್‌ನಲ್ಲಿ ಉತ್ತರ ಪ್ರದೇಶದ ಪವನ್ ಕುಮಾರ್ ಎಂಬಾತನ ಜೊತೆ ಸ್ನೇಹ ಶುರುವಾಗಿದ್ದು, ಸ್ನೇಹ ಕೊನೆಗೆ ಪ್ರೇಮಾಂಕುರಕ್ಕೆ ನಾಂದಿ ಹಾಡಿದೆ. ಹೀಗಾಗಿ, ತಾನು ಪ್ರೀತಿಸಿದ ಹುಡುಗನನ್ನು ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಡಲು ಸ್ವೀಡಿಷ್ ಕ್ರಿಸ್ಟನ್ ಲೀಬರ್ಟ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಇವರ ಪ್ರೀತಿಗೆ ಪವನ್ ಮನೆಯಲ್ಲಿ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಸ್ವೀಡಿಷ್ ಕ್ರಿಸ್ಟನ್ ಲೀಬರ್ಟ್ ಅವರನ್ನು ಪವನ್ ಕುಮಾರ್ ಕುಟುಂಬಸ್ಥರ ಸಮ್ಮುಖದಲ್ಲಿ ಜಿಲ್ಲೆಯ ಶಾಲೆಯೊಂದರಲ್ಲಿ ಹಿಂದೂ ಸಂಪ್ರದಾಯದ ಅನುಸಾರ ಸಪ್ತಪದಿ ತುಳಿದಿದ್ದಾರೆ.
ಕೆಲ ವರದಿಗಳ ಪ್ರಕಾರ, ಕ್ರಿಸ್ಟೆನ್ ಮತ್ತು ಪವನ್ 2012 ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಿತರಾಗಿದ್ದು, ಪವನ್ ಬಿ.ಟೆಕ್ ಪದವೀಧರರಾಗಿ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವೀಡನ್ ಯುವತಿ ಭಾರತಕ್ಕೆ ಅನೇಕ ಬಾರಿ ಭೇಟಿ ನೀಡಿದ್ದು, ಅವರೇ ಹೇಳಿಕೊಂಡಂತೆ, “ನಾನು ಮೊದಲು ಭಾರತಕ್ಕೆ ಬಂದಿದ್ದೇನೆ, ನಾನು ಭಾರತವನ್ನು ಪ್ರೀತಿಸುತ್ತೇನೆ ಮತ್ತು ಈ ಮದುವೆಯ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ” ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಈ ಲವ್ ಕಹಾನಿಯ ಮ್ಯಾರೇಜ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಟ್ರೆಂಡ್ ಸೃಷ್ಟಿಸಿದ್ದು, ಇದನ್ನು ನೋಡಿದ ಯುವಕರು ನಾಳೆಯಿಂದ ನಾನೂ ಚಾಟ್ ಮಾಡ್ತೀನಿ ಗುರು ಅಂತ ಕಾಮೆಂಟ್ ಮಾಡಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಖುಷಿಯಲ್ಲಿ ತಮ್ಮ ನೆಮ್ಮದಿಯನ್ನು ಕಾಣುವ ಪವನ್ ಕುಮಾರ್ ತಂದೆ ಗೀತಮ್ ಸಿಂಗ್ ಈ ಮದುವೆಗೆ ತಮ್ಮ ಸಂಪೂರ್ಣ ಬೆಂಬಲ ಇತ್ತು ಎಂದು ಹೇಳಿಕೊಂಡಿದ್ದಾರೆ. ಏನೇ ಆಗಲಿ. ಈ ನವ ಜೋಡಿಗೆ ಶುಭವಾಗಲಿ ಅಂತ ಹಾರೈಸೋಣ ಅಲ್ವಾ!!!
