ಸದ್ಯ ಕಾರು ಕಂಪನಿಗಳು ವಿನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಇದು ಜನರನ್ನು ಆಕರ್ಷಿಸುತ್ತಿವೆ. ಆದರೆ ಟ್ರಾಫಿಕ್, ಕಾರ್ ಪಾರ್ಕಿಂಗ್ ಸಮಸ್ಯೆಯಿಂದಾಗಿ ಕೆಲವರು ದ್ವಿಚಕ್ರ ವಾಹನವನ್ನು ಬಳಸಲು ಮುಂದಾಗುತ್ತಾರೆ. ದ್ವಿಚಕ್ರ ವಾಹನವಾದರೆ ಟ್ರಾಫಿಕ್ ನಲ್ಲಿ ಸುಲಭವಾಗಿ ಮುಂದೆ ಸಾಗಬಹುದು. ಹಾಗೂ ಪಾರ್ಕಿಂಗ್ ಕೂಡ ಸುಲಭ. ಸದ್ಯ ಮಾರುಕಟ್ಟೆಗೆ ಮಿನಿ ಎಲೆಕ್ಟ್ರಿಕ್ ಕಾರೊಂದು ಎಂಟ್ರಿ ಕೊಟ್ಟಿದ್ದು, ಇದು ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲಿದೆ.
ಇಸ್ರೇಲ್‌ನ ಸಿಟಿ ಟ್ರಾನ್ಸ್‌ಫಾರ್ಮರ್ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಸ್ಟಾರ್ಟಪ್ ಮಿನಿ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಈ ಮಿನಿ ಎಲೆಕ್ಟ್ರಿಕ್ ಕಾರಿನ ಹೆಸರು CT-2 ಎಂದಾಗಿದೆ. ಟ್ರಾಫಿಕ್ ದಟ್ಟಣೆಯ ನಗರಗಳಲ್ಲಿ ಸಂಚಾರಕ್ಕೆ ಅನುಕೂಲ ಆಗುವ ಹಾಗೆ ಈ ಕಾರನ್ನು ತಯಾರಿಸಲಾಗಿದೆ. ಈ ಕಾರು ಟ್ರಾಫಿಕ್ ಜಾಮ್‌ನಲ್ಲಿ ದ್ವಿಚಕ್ರ ವಾಹನಗಳ ಹಾಗೇ ಸುಲಭವಾಗಿ, ವೇಗವಾಗಿ ಮುನ್ನುಗ್ಗಲು ಸಾಧ್ಯವಾಗುತ್ತದೆ. ಅಷ್ಟು ಪುಟ್ಟದಾದ ಕಾರು ಇದಾಗಿದೆ. ಅಲ್ಲದೆ ಪಾರ್ಕಿಂಗ್ ಸಮಸ್ಯೆಯೂ ಉಂಟಾಗುವುದಿಲ್ಲ. ಇದಂತು ಜನರಿಗೆ ಅನುಕೂಲಕರವಾಗಿದೆ.
ಈ ಕಾರು ಕೇವಲ 1 ಮೀಟರ್ ಅಗಲವಿದ್ದು, 450kg ತೂಕವಿದೆ. ಅಲ್ಲದೆ, ಸಣ್ಣ ಪುಟ್ಟ ಬೀದಿಗಳಲ್ಲೂ ಸುಲಭವಾಗಿ ಸಂಚರಿಸಬಲ್ಲದು, ಅಷ್ಟು ಸ್ಲಿಮ್ ಕಾರ್ ಇದಾಗಿದೆ. ಇದಿಷ್ಟೇ ಅಲ್ಲದೆ, ಒಂದು ಕಾರು ನಿಲ್ಲುವ ಜಾಗದಲ್ಲಿ ನಾಲ್ಕು ಸಿಟಿ-2 ಕಾರುಗಳನ್ನು ನಿಲ್ಲಿಸಬಹುದು ಎಂದು ಕಂಪನಿ ಹೇಳಿದೆ. ಇನ್ನು ಈ ಮಿನಿ ಎಲೆಕ್ಟ್ರಿಕ್ ಕಾರಿನಲ್ಲಿ ಚಾಲಕ ಮತ್ತು ಓರ್ವ ಪ್ರಯಾಣಿಕ ಕುಳಿತುಕೊಂಡು ಪ್ರಯಾಣಿಸಬಹುದಾಗಿದೆ.
ಕಡಿಮೆ ತೂಕದ, ಸುಂದರವಾದ, ಪುಟ್ಟದಾದ ಈ ಎಲೆಕ್ಟ್ರಿಕ್ ಕಾರ್ ಒಂದೇ ಒಂದು ಗಂಟೆ ಸಾಕು ಫುಲ್ ಚಾರ್ಜ್ ಆಗೋಕೆ, ನಂತರ ಸುಮಾರು 180KM ಕ್ರಮಿಸುತ್ತದೆ. ಹಾಗೇ ಕಾರ್ಯಕ್ಷಮತೆಯ ಮೋಡ್‌ನಲ್ಲಿ, ಈ ಕಾರು 90 kmph ವೇಗದ ವೇಗವನ್ನು ತಲುಪಬಹುದು ಎನ್ನಲಾಗಿದೆ. ಈ ಕಾರು ಗ್ರಾಹಕರಿಗೆ ಪಶ್ಚಿಮ ಯುರೋಪ್‌ನಲ್ಲಿ 2024 ರ ಅಂತ್ಯದಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದ್ದು, ಇದರ ಬೆಲೆ ಸುಮಾರು $16,000 (ಸುಮಾರು ₹13 ಲಕ್ಷ) ಎಂದು ಊಹಿಸಲಾಗಿದೆ.
