ಅಂದು ಆಕೆ, ಮುಂಜಾನೆ ಎದ್ದು ಬಾತ್ ರೂಮಿಗೆ ಹೋಗಿದ್ದೊಂದು ನೆನಪು ಮಾತ್ರ. ಬಳಿಕ ಕಣ್ಣು ತೆರೆದು ನೋಡಿದರೆ ಸ್ವರ್ಗ! ಆಕೆ ಸ್ವರ್ಗದಲ್ಲಿ ಇದ್ದಳಂತೆ. ಇಲ್ಲಿ ಅವಳ 15 ನಿಮಿಷಗಳ ಕಾಲ ವೈದ್ಯಕೀಯವಾಗಿ ಸಾವಿನ ಸ್ಥಿತಿಯಲ್ಲಿದ್ದ ದೇಹಕ್ಕೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರಂತೆ. ಆ ಸಮಯದಲ್ಲಿ ಸ್ವರ್ಗದಲ್ಲಿದ್ದ ಆಕೆಗೆ ಆ ನಿಮಿಷಗಳು ಐದು ವರ್ಷಗಳನ್ನು ಕಳೆದಂತಹ ಅನುಭವವಾಗಿದೆಯಂತೆ. ಅರೆ ಇದೇನು, ಈ ಮಹಿಳೆ ಸತ್ತು ಸ್ವರ್ಗಕ್ಕೆ ಹೋಗಿ, ಮತ್ತೆ ಬದುಕಿ ಬಂದಳಾ? ಹಾಗಾದ್ರೆ ಈಕೆ ಮಾಯಾವಾದಿಯೇ? ಎಂದು ಯೋಚಿಸ್ತಿದ್ದೀರಾ. ಹಾಗಿದ್ರೆ ನಿಮ್ಮ ಮೊದಲನೇ ಊಹೆ ಸರಿ. ಆದರೆ ಎರಡನೆ ಆಲೋಚನೆ ಅದಕ್ಕೆ ವಿರುದ್ಧವಾದದ್ದು. ಯಾಕೆ ಗೊತ್ತಾ? ಈ ರೀತಿ ತಮ್ಮ ಸ್ವರ್ಗದ ಅನುಭವ ಹಂಚಿಕೊಂಡದ್ದು ಅಮೆರಿಕದ ಖ್ಯಾತ ಲೇಖಕಿಯಾದ ಡಾ.ಲಿಂಡಾ ಕ್ರೆಮರ್ ಎಂಬಾಕೆ! ಹೌದು, ತನ್ನ ಜೀವನದ ಈ ಘಟನೆ ಕುರಿತು ಪುಸ್ತಕವನ್ನೇ ಬರೆದ ಈಕೆ, ಸ್ವರ್ಗದ ಅನುಭವಗಳನ್ನು ಹಂಚಿಕೊಂಡು ಕುತೂಹಲ ಮೂಡಿಸಿದ್ದಾರೆ.. ಹಾಗಾದರೆ ಆ ಪುಸ್ತಕದಲ್ಲಿ ಏನಿದೆ? ಅವಳು ಕಂಡ ಸ್ವರ್ಗ ಹೇಗಿತ್ತು ಗೊತ್ತಾ?ನಮ್ಮ ಸಾವಿನ ನಂತರದ ಕಥೆ ಏನು ಎಂಬುದಕ್ಕೆ ಇಲ್ಲಿಯವರೆಗೆ ವಿಜ್ಞಾನದಲ್ಲಿ ಯಾವುದೇ ಉತ್ತರ ಇಲ್ಲ.
ಪ್ರತಿಯೊಂದು ಧರ್ಮವೂ ಅದರ ನಂಬಿಕೆಗೆ ಅನುಗುಣವಾಗಿ ಅದರದೇ ಆದ ಉತ್ತರ ನೀಡಬಹುದು. ಅಲ್ಲದೆ ಸಾವಿನ ನಂತರದ ಅನುಭವಗಳು ಹೇಗಿರುತ್ತವೆ ಎನ್ನುವ ಪ್ರಶ್ನೆಗೆ ಇದುವರೆಗೂ ನಿಖರ ಉತ್ತರವಿಲ್ಲ. ಅದು ಅನುಭವಕ್ಕೇ ದಕ್ಕಬೇಕು. ಆದರೂ ಅದನ್ನು ಯಾರೊಂದಿಗೂ ಹಂಚಿಕೊಳ್ಳಲು ಆಗುವುದಿಲ್ಲ ಎನ್ನುವುದನ್ನೂ ನೆನಪಿಡಬೇಕು. ಸಾವಿನ ನಂತರ ಏನಾಗುತ್ತದೆ ಎಂದು ಇದುವರೆಗೆ ಹಲವರು ಹಲವಾರು ರೀತಿಯಲ್ಲಿ ಹೇಳಿದ್ದಾರೆ. ಅವುಗಳಲ್ಲಿ ಯಾವುದು ನಿಜ, ಯಾವುದು ಕಲ್ಪನೆ ಎನ್ನುವುದು ನಮ್ಮ ಅನುಭವಕ್ಕೆ ಬರುವುದು ಸಾಧ್ಯವಿಲ್ಲ. ಆದರೆ, ನಮ್ಮ ಭಾರತೀಯರಲ್ಲಿರುವ ಪುನರ್ಜನ್ಮದ ಪರಿಕಲ್ಪನೆಯಿಂದಾಗಿ ಮರಣದ ಬಳಿಕ ಮತ್ತೊಂದು ಜೀವನವಿದೆ ಎನ್ನುವುದನ್ನು ನಂಬುತ್ತೇವೆ. ಇದಕ್ಕೂ ಸಹ ವೈಜ್ಞಾನಿಕ ಆಧಾರಗಳಿಲ್ಲ. ಆದರೆ, ಸಾವಿನ ಸನಿಹಕ್ಕೆ ಹೋಗಿ ಮರಳಿ ಜೀವ ಪಡೆದುಕೊಂಡ ಹಲವರು ತಮ್ಮ ರೋಚಕ ಅನುಭವಗಳನ್ನು ದಾಖಲಿಸಿದ್ದಾರೆ. ಇದೀಗ ಇಂತವರ ಸಾಲಿನಲ್ಲಿ ಅಮೆರಿಕದ ಲೇಖಕಿ ಡಾ.ಲಿಂಡಾ ಕ್ರೆಮರ್ ಒಬ್ಬರಾಗಿರುವುದು ಆಶ್ಚರ್ಯ ಉಂಟುಮಾಡಿದೆ. ಭಾರತೀಯರಾದ ನಮ್ಮಲ್ಲಿ ಇಂತಹ ಕಾಲ್ಪನಿಕ ನಂಬಿಕೆಗಳಿದ್ದು, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂತಹ ನಂಬಿಕೆಗಳಿಲ್ಲ. ಆದರೂ, ಲಿಂಡಾ ಕ್ರೆಮರ್ ಸಾವಿನ ನಂತರದ ಅನುಭವಕ್ಕೆ ಒಳಗಾಗಿರುವುದು ರೋಚಕವೆನಿಸುತ್ತದೆ.ಲೇಖಕಿ ಡಾ.ಲಿಂಡಾ ಕ್ರೆಮರ್ ಅವರು ಬರೆದಂತಹ ‘ಫೈವ್ ಇಯರ್ಸ್ ಇನ್ ಹೆವನ್’ (Five Years in Heaven)’ ಎನ್ನುವ ಕೃತಿ 2021ರಲ್ಲಿ ಪ್ರಕಟವಾಗಿದೆ. ಇದರಲ್ಲಿ ಅವರು ತಮ್ಮ ಸಾವಿನ ನಂತರದ ಅನುಭವಗಳನ್ನು ಹೇಳಿಕೊಂಡಿದ್ದು, ಸ್ವರ್ಗ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.
2001ರಲ್ಲಿ ಡಾ.ಲಿಂಡಾ ಅವರು ಸರಿಸುಮಾರು 15 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್ ಎನ್ನುವ ಸ್ಥಿತಿ ತಲುಪಿದ್ದರು. ಮೇ 6ರ ಮುಂಜಾನೆ ಇವರಿಗೆ ಬಾತ್ ರೂಮಿಗೆ ಹೋಗಿದ್ದೊಂದು ನೆನಪು, ಅಷ್ಟೆ. ಬಳಿಕ ಅವರು ಸ್ವರ್ಗದಲ್ಲಿದ್ದರು. 15 ನಿಮಿಷಗಳ ಕಾಲ ವೈದ್ಯಕೀಯವಾಗಿ ಸಾವಿನ ಸ್ಥಿತಿಯಲ್ಲಿದ್ದ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆ ಸಮಯದಲ್ಲಿ ‘ಸ್ವರ್ಗದಲ್ಲಿ ಐದು ವರ್ಷಗಳನ್ನು ಕಳೆದಂತಹ ಅನುಭವವಾಗಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಅವರು ನೀಡಿರುವ ಸಂದರ್ಶನ ಈಗ ಜಗತ್ತಿನೆಲ್ಲೆಡೆ ಭಾರೀ ವೈರಲ್ ಆಗಿದ್ದು, ಜೊತೆಗೆ ಭಾರೀ ವೀವ್ಸ್ ಪಡೆದುಕೊಂಡಿದೆ.ತನ್ನ ಸ್ವರ್ಗದ ಪಯಣದ ಕುರಿತು ಡಾ. ಲಿಂಡಾ ಹಂಚಿಕೊಂಡಿರುವ ವಿದ್ಯಮಾನಗಳು ಜಿಜಕ್ಕೂ ನಮ್ಮನ್ನೂ ರೋಮಾಂಚನ ಗೊಳಿಸುತ್ತದೆ. ಸ್ವರ್ಗಕ್ಕೆ ಹೋದ ಬಳಿಕ ಮನದಲ್ಲಿ ನಾವು ಈ ಸ್ಥಳಗಳಿಗೆ ಹೋಗಬೇಕೆಂದು ಸಂಕಲ್ಪ ಮಾಡಿಕೊಂಡ ತಕ್ಷಣ ನಿಗದಿತ ಸ್ಥಳಕ್ಕೆ ಹೋಗಿ ತಲುಪುವ ಸಾಮರ್ಥ್ಯ ಅಲ್ಲಿತ್ತಂತೆ. ಲಿಂಡಾ ಕೂಡ ಇದೇ ಮಾದರಿಯಲ್ಲಿ ಸಾಕಷ್ಟು ಕಡೆ ಸಂಚರಿಸಿದ್ದರು.
ಸ್ವರ್ಗದಲ್ಲಿ ಅವರು ಅಲ್ಲಿದ್ದ ಇತರ ಜನರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಜೊತೆಗೆ ನಾನು ಹೂವಿನ ಮೈದಾನದಲ್ಲಿ ನಿಂತಿರುವ ಹಾಗೆ ಕಾಣುತ್ತಿತ್ತು. ಆ ಹೂವುಗಳು ಅತ್ಯದ್ಭುತವಾಗಿದ್ದವು. ಎಂದು ಎಲ್ಲವನ್ನೂ ವರ್ಣಿಸಿದ್ದಾರೆ.ಹೂವಿನ ಮೈದಾನದ ಎದುರು ಸಾಲುಸಾಲು ಪರ್ವತಗಳಿದ್ದವು. ಮೌಂಟ್ ಎವರೆಸ್ಟ್ ಶಿಖರಕ್ಕಿಂತ ಸಾವಿರಾರು ಪಟ್ಟು ಎತ್ತರದ ಆ ಶಿಖರಗಳ ಸಾಲುಗಳನ್ನು ಕಂಡು ನಿಬ್ಬೆರಗಾದೆ. ಅವುಗಳ ತುದಿ ಗೋಚರಿಸುತ್ತಿರಲಿಲ್ಲ. ಅದೊಂದು ಬೃಹದಾಕಾರವಾದ ಪರ್ವತಗಳ ಪ್ರದೇಶವಾಗಿತ್ತು. ಅಲ್ಲಿನ ಕಟ್ಟಡಗಳು ಗಗನಚುಂಬಿಯಾಗಿದ್ದವು. ನಮ್ಮ ಭೂಮಿಯ ಮೇಲಿರುವ ದುಬೈ ಕೂಡ ಅಲ್ಲಿನ ಕಟ್ಟಡಗಳ ಎದುರು ಮಿನಿಯೇಚರ್ ನಂತೆ ಭಾಸವಾಗುವಂತಿತ್ತು. ಅಲ್ಲಿ ಸುತ್ತಮುತ್ತ ಸರೋವರ ಗಳಿದ್ದವು. ಎಲ್ಲವನ್ನೂ ಒಂದು ದೀರ್ಘವಾದ ನೋಟದಲ್ಲೇ ನೋಡಬಹುದಾಗಿತ್ತು. ಅಲ್ಲಿ ಜನರಿದ್ದರು, ಅವರೊಂದಿಗೆ ಹರಟಬಹುದಿತ್ತು. ಅವರಲ್ಲಿ ಒಬ್ಬಳಾಗಿ ಬೆರೆತೆ. ಇದು ಸರಿಸುಮಾರು ಐದು ವರ್ಷಗಳ ಅನುಭವ ಎಂದು ಡಾ.ಲಿಂಡಾ ಹೇಳಿಕೊಂಡಿದ್ದಾರೆ.
