ಕಳೆದ ಬಾರಿ ವಿಜಯನಗರ ಜಿಲ್ಲೆ ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳು 2023 ರಲ್ಲಿ ನಡೆಯಲಿರುವ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿದಿದ್ದರು. 2023 ಕ್ಕೆ ಜಾಗತಿಕ ಮಟ್ಟದಲ್ಲಿ ಸಮಸ್ಯೆ ತಲೆದೋರಲಿದ್ದು, ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದು , ಸಾಧು ಸಂತರಿಗೆ ತೊಂದರೆ ಉಂಟಾಗಲಿದೆ. ಇದರ ಜೊತೆಗೆ ರಾಜ್ಯದ ರಾಜಕೀಯದ ಬಗ್ಗೆ ಮಾತನಾಡಿದ್ದು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹಾಗೂ ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರಲಿರುವ ಕುರಿತು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಇಂದು ಮಾತನಾಡಿದ ಕೋಡಿ ಶ್ರೀ, ರಾಜಕೀಯ ಅಸ್ಥಿರತೆ ಇದೆ. ಯಾವ ಪಕ್ಷವೂ ಕೂಡಿ ಹೋಗೋದು ಕಷ್ಟ. ಚುನಾವಣೆವರೆಗೂ ಏನೊಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ಡಿವೈಡ್ ಆಗುತ್ತದೆ. ಒಂದೇ ಪಕ್ಷಕ್ಕೆ ಅಧಿಕಾರ ಬರುತ್ತದೆ. ಹಾಗೂ ಯುಗಾದಿ ನಂತರ ಪ್ರಾಕೃತಿಕ ವಿಕೋಪ ಉಂಟಾಗುತ್ತದೆ ಎಂದು ಕೋಡಿಶ್ರೀ ಭಯಾನಕ ಭವಿಷ್ಯ ನುಡಿದಿದ್ದಾರೆ.
ಯಾರೇ ಆಗಲಿ ತಪ್ಪು ಇರಲಿ, ಸರಿ ಇರಲಿ ನಾವು ಏನು ಮಾಡುತ್ತೇವೆಯೋ ಅದೇ ಫಲ ಕೊಡುತ್ತದೆ. ಒಳ್ಳೆಯದನ್ನೇ ಮಾಡಿದ್ದರೆ ಒಳ್ಳೆಯದೇ ಆಗುತ್ತದೆ. ಕೆಟ್ಟದ್ದಕ್ಕೆ ಅದೇ ರೀತಿಯ ಫಲ ಸಿಗುತ್ತದೆ. ಮಾಡಬಾರದು ಮಾಡಿದ್ರೆ ಆಗಬಾರದ್ದೇ ಆಗುತ್ತೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಭಾರತ ಜೊಡೊ ವಿಚಾರವಾಗಿ ಮಾತನಾಡಿದ ಅವರು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಚುನಾವಣೆವರೆಗೂ ಪಕ್ಷಾಂತರಗಳು ಇರುತ್ತವೆ. ರಾಜಕೀಯ ಪಕ್ಷಗಳು ಒಡೆಯುತ್ತವೆ. ಪಕ್ಷಗಳು ಡಿವೈಡ್ ಆಗುತ್ತವೆ. ಆದರೆ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರಲಿದೆ. ಮುಂದೆ ಎಷ್ಟು ಸುಖವಿದೆಯೋ ಅಷ್ಟೇ ಕಷ್ಟವೂ ಇದೆ ಎಂದರು.
ಕಳೆದ ಬಾರಿ ಹೊಸಪೇಟೆಯಲ್ಲಿ ಒಲೆ ಹತ್ತಿ ಉರಿದರೆ ನಿಲಬಹುದು, ಆದರೆ ಧರೆ ಹತ್ತಿ ಉರಿದರೆ ನಿಲಲಾರದು ಎಂದು ಹೇಳಿದ ಮರುದಿನವೇ ಧರೆ ಹತ್ತಿ ಉರಿದಿದೆ. ಅಂದ್ರೆ ನೇಪಾಳದಲ್ಲಿ ವಿಮಾನ ಅಪಘಾತವಾಗಿ 50 ಮಂದಿ ಸಾವನ್ನಪ್ಪಿದ್ದರು. ಇನ್ನು ಯುಗಾದಿ ನಂತರ ಮುಂದಿನ ಎಲ್ಲಾ ವಿವರಗಳನ್ನು ತಿಳಿಸುತ್ತೇನೆ. ಯುಗಾದಿ ನಂತರ ಪ್ರಕೃತಿ ವಿಕೋಪ ಉಂಟಾಗಲಿದೆ ಎಂದು ಹೇಳಿದರು.
