ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಎಸ್ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್ ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ. ಅಷ್ಟೆ ಅಲ್ಲದೆ, ಸರ್ಕಾರ ವಿದ್ಯಾರ್ಥಿಗಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕ ನೆರವು, ಸ್ಕಾಲರ್ ಶಿಪ್ ಜೊತೆಗೆ ಶಿಕ್ಷಣ ಬೆಂಬಲಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಜಾರಿಗೆ ತಂದಿದೆ. ಇದೀಗ, ರಿಲಯನ್ಸ್ ಫೌಂಡೇಶನ್ 2022-23ನೇ ಸಾಲಿನ ಪದವಿಪೂರ್ವ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಇಂದು ಪುಸ್ತಕ ಹಿಡಿಯಬೇಕಿದ್ದ ಅದೆಷ್ಟೋ ಕೈಗಳು ಆರ್ಥಿಕ ಪರಿಸ್ಥಿತಿ ಇಲ್ಲವೇ ಮನೆಯ ಸ್ಥಿತಿಗತಿಯಿಂದ ಓದಿಗೆ ತಿಲಾಂಜಲಿ ಇಟ್ಟು ಕೂಲಿ ಮಾಡುವತ್ತ ಮುಖ ಮಾಡುವುದು ಈಗಲೂ ನಡೆಯುತ್ತಿದೆ. ಈ ರೀತಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ನೆರವಾಗಲು ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.
ಆರ್ಥಿಕ ಪರಿಸ್ಥಿತಿಗಳಿಂದ ಉನ್ನತ ಶಿಕ್ಷಣವನ್ನು ಮುಂದುವರಿಸುವ ಕನಸನ್ನು ನನಸು ಮಾಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮದಡಿಯಲ್ಲಿ 5,000 ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 14, 2023 ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸಿ ಸ್ಕಾಲರ್ ಶಿಪ್ ನ ಪ್ರಯೋಜನ ಪಡೆದುಕೊಳ್ಳಬಹುದು.
ಈ ಸ್ಕಾಲರ್ ಶಿಪ್ ಪಡೆಯಲು ಅಭ್ಯರ್ಥಿಗಳು ಹೊಂದಿರಬೇಕಾದ ಮಾನದಂಡಗಳು ಹೀಗಿವೆ:
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 60 ರಷ್ಟು ಅಂಕಗಳಿಸಿರಬೇಕಾಗುತ್ತದೆ. ಪದವಿ ಮೊದಲನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ವಿಷಯದಲ್ಲಿ ಪದವಿಪೂರ್ವ ಕೋರ್ಸ್ ಅನ್ನು ವ್ಯಾಸಂಗ ಮಾಡುತ್ತಿರಬೇಕು. ಇದರ ಜೊತೆಗೆ ವಿದ್ಯಾರ್ಥಿಗಳ ಕುಟುಂಬದ ಆದಾಯ ಎಲ್ಲಾ ಮೂಲಗಳಿಂದ ವಾರ್ಷಿಕ 15 ಲಕ್ಷಗಳಿಗಿಂತ ಹೆಚ್ಚಿರಬಾರದು. ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ 2 ಲಕ್ಷದ ವರೆಗೂ ವಿದ್ಯಾರ್ಥಿವೇತನ ಲಭ್ಯವಾಗಲಿದೆ.
ಈ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಲು ಮತ್ತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ರಿಲಯನ್ಸ್ ಫೌಂಡೇಶನ್ ಅಧಿಕೃತ ವೆಬ್‌ಸೈಟ್ https://www.scholarships.reliancefoundation.org/ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಅರ್ಹ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸಿ ಸ್ಕಾಲರ್ ಶಿಪ್ ನ ಪ್ರಯೋಜನ ಪಡೆದುಕೊಳ್ಳಬಹುದು.
