ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ (Mahila Samman Savings Certificate) ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಿದ್ದು ಈ ಯೋಜನೆಯಡಿ ಮಹಿಳೆಯರು ಸಣ್ಣ ಉಳಿತಾಯ ಮಾಡಬಹುದಾಗಿದೆ.
ಸದ್ಯ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯಲ್ಲಿ ಎರಡು ವರ್ಷಗಳ ಅವಧಿಗೆ ಗರಿಷ್ಠ 2 ಲಕ್ಷ ರೂ. ವರೆಗೆ ಮಹಿಳೆಯರು ಠೇವಣಿ ಇಡಬಹುದಾಗಿದೆ. ಈ ಯೋಜನೆ 2025ರ ಮಾರ್ಚ್ನಿಂದ ಆರಂಭಗೊಳ್ಳಲಿದ್ದು ಈ ಯೋಜನೆಯಡಿ ಮಹಿಳೆಯರು ಮಾಡುವ ಉಳಿತಾಯಕ್ಕೆ ಶೇ 7.5ರ ಬಡ್ಡಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಅದಲ್ಲದೆ ಭಾಗಶಃ ಮೊತ್ತ ಹಿಂಪಡೆಯುವ ಆಯ್ಕೆಯೂ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಉಳಿತಾಯ ಯೋಜನೆಯಲ್ಲಿದೆ.
ಪ್ರಸ್ತುತ ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಸದ್ಯ ಶೇ 6.75ರ ಬಡ್ಡಿ ನೀಡುತ್ತಿದ್ದು, ಇದು ಅನೇಕ ಖಾಸಗಿ ಬ್ಯಾಂಕ್ಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳು ನೀಡುತ್ತಿರುವ ಬಡ್ಡಿಗಿಂತಲೂ ಕಡಿಮೆಯಾಗಿದೆ. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ಗಳು ಶೇ 7ರ ಬಡ್ಡಿ ನೀಡುತ್ತಿವೆ.
ಈಗಿನ ಸ್ಥಿರ ಠೇವಣಿ ಅಥವಾ ಎಫ್ಡಿ ಬಡ್ಡಿ ದರಗಳ ಜತೆ ಹೋಲಿಸಿದರೆ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಉತ್ತಮ ಯೋಜನೆಯಾಗಿದ್ದು, ಶೇ 0.50 ಯಿಂದ ಶೇ 1ರ ವರೆಗೆ ಹೆಚ್ಚಿನ ಬಡ್ಡಿಯ ಆಫರ್ ನೀಡಿದೆ. ಅಲ್ಲದೆ ಹೂಡಿಕೆದಾರರು ಬ್ಯಾಂಕಿನ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಿಕೊಳ್ಳಬೇಕು.
ಇನ್ನು ದೊಡ್ಡ ಮೊತ್ತದ ಹೂಡಿಕೆ ಮಾಡುವವರಾದರೆ, ಸಣ್ಣ ಹಣಕಾಸು ಸಂಸ್ಥೆಗಳೂ ಒಳಗೊಂಡಂತೆ ಶೆಡ್ಯೂಲ್ಡ್ ಬ್ಯಾಂಕ್ಗಳಲ್ಲಿ ಆರ್ಬಿಐನ ಠೇವಣಿ ವಿಮಾ ಯೋಜನೆಯಡಿಯಲ್ಲಿ 5 ಲಕ್ಷ ರೂ.ವರೆಗೂ ಠೇವಣಿ ಇಡಲು ಅವಕಾಶವಿದೆ.
ಮುಖ್ಯವಾಗಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಕೇಂದ್ರ ಸರ್ಕಾರ ಬೆಂಬಲಿತ ಯೋಜನೆಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಸ್ಎಜಿ ಇನ್ಫೋಟೆಕ್ನ ಎಂಡಿ ಅಮಿತ್ ಗುಪ್ತಾ ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ತಜ್ಞರ ಪ್ರಕಾರ ಹೆಚ್ಚು ಬಡ್ಡಿ ದೊರೆಯುವ ಬ್ಯಾಂಕ್ ಎಫ್ಡಿಗಿಂತಲೂ ಮಹಿಳೆಯರಿಗೆ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯೇ ಉತ್ತಮವಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
