ಕಾಲ ಬದಲಾಗಿದೆ ಪ್ರೀತಿ ವಾತ್ಸಲ್ಯ ಕರುಳು ಸಂಬಂಧ ಬಾಂಧವ್ಯಗಳಿಗೆ ಬೆಲೆ ಇಲ್ಲದಾಗಿದೆ. ತಾನು ತನ್ನದು ತನ್ನಿಂದ ಎಂದು ಜನರು ಮೆರೆದಾಡುತ್ತಿದ್ದಾರೆ. ಜನ ಒಂದು ತಪ್ಪು ಮಾಡಿ ಸಾವಿರ ತೊಂದರೆಗಳಿಗೆ ಸಿಲುಕಿ ಸಾವಿರ ತಪ್ಪು ಮಾಡಲು ಮುಂದಾಗುವ ಪರಿಸ್ಥಿತಿ ಹುಟ್ಟಿಕೊಂಡಿದೆ.
ಹೌದು ಗುಜರಾತ್‌ನ ಸೂರತ್ ನಗರದ ಗೊಡತಾರಾ ಪ್ರದೇಶದಲ್ಲಿ ಯುವ ಜೋಡಿಯೊಂದು ರಸ್ತೆಬದಿಯಲ್ಲಿ ಭ್ರೂಣ ಎಸೆದು ಪರಾರಿಯಾದ ಹೃದಯವಿದ್ರಾವಕ ಘಟನೆ ಜರುಗಿದೆ.
ಕೇವಲ ಮೂರು ತಿಂಗಳ ಭ್ರೂಣವನ್ನು ನಿರ್ದಾಕ್ಷಿಣ್ಯವಾಗಿ ರಸ್ತೆಯಲ್ಲಿ ಎಸೆದು ಹೋಗಿರುವ ದೃಶ್ಯ ಅಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಭ್ರೂಣವನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆಯ ಕುರಿತು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗೋದಾರಾ ಪ್ರದೇಶದ ಲಕ್ಷ್ಮೀನಾರಾಯಣ ಸೊಸೈಟಿಯ ಗೇಟ್ ಬಳಿ ಭ್ರೂಣ ಬಿದ್ದಿರುವ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಪೊಲೀಸರು ಭ್ರೂಣವನ್ನು ವಶಪಡಿಸಿಕೊಂಡು ಸಮೀಪದ ಸಮೀರ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಸೊಸೈಟಿಯ ಗೇಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದಾಗ ಯುವಕ – ಯುವತಿ ಕತ್ತಲಲ್ಲಿ ಭ್ರೂಣ ಎಸೆದು ಪರಾರಿಯಾಗಿರುವುದು ಕಂಡು ಬಂದಿದೆ. ಯುವಕ ಕೈಯಲ್ಲಿ ಫೈಲ್ ಹಿಡಿದು ನಿಂತಿದ್ದರೆ, ಯುವತಿ ಭ್ರೂಣವನ್ನು ರಸ್ತೆಬದಿ ಕತ್ತಲಲ್ಲಿ ಎಸೆದಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರ ಮುಖಗಳು ಸ್ಪಷ್ಟವಾಗಿ ಗೋಚರಿಸದಿದ್ದರೂ, ಇಬ್ಬರೂ ಒಂದೇ ಪ್ರದೇಶದ ನಿವಾಸಿಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರ ಆಧಾರದ ಮೇಲೆ ಅವರನ್ನು ಗುರುತಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಸದ್ಯ ಇಂತಹ ಹೀನಾಯ ಘಟನೆಗಳು ಅಲ್ಲಲ್ಲಿ ತಲೆ ಎತ್ತುತ್ತಿದ್ದು ಜನರು ಪ್ರಾಣಿಗಳಿಗಿಂತ ಕ್ರೂರ ವರ್ತನೆಯನ್ನು ನಡೆಸುತ್ತಿರುವುದು ಬಹಳ ಶೋಚನೀಯವಾಗಿದೆ. ಇಂತಹವರಿಗೆ ಸರಿಯಾದ ಶಿಕ್ಷೆ ಒದಗಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.
