ಇತ್ತೀಚೆಗೆ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ. ಹವಾಮಾನ ಬದಲಾದ ಹಾಗೇ ರೋಗಗಳು ವಕ್ಕರಿಸುತ್ತವೆ.
ಆರೋಗ್ಯ ಉತ್ತಮವಾಗಿ ಇರಬೇಕು ಅಂದ್ರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity) ಬಲವಾಗಿರಬೇಕು. ದುರ್ಬಲ ರೋಗ ನಿರೋಧಕ ಶಕ್ತಿ ಇದ್ದವರಿಗೆ ಸಣ್ಣ ಪುಟ್ಟ ಕಾಯಿಲೆಗಳು ಸಹ ಹೆಚ್ಚಾಗಿ ಆಸ್ಪತ್ರೆ ಸೇರುವಂತೆ ಮಾಡುತ್ತದೆ. ಈಗಂತು ಸಣ್ಣಪುಟ್ಟ ಶೀತ, ಕೆಮ್ಮುಗಳಿಗೂ ಆಸ್ಪತ್ರೆಯ ದಾರಿ ಹಿಡಿಯುವಂತಾಗಿದೆ. ಈ ಕೆಮ್ಮು, ನೆಗಡಿ, ವೈರಲ್ ಜ್ವರ ಮತ್ತು ಅಲರ್ಜಿಯಂತಹ ರೋಗಗಳು ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಬರುತ್ತವೆ. ಇದನ್ನು ದೂರಮಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಈ ರೋಗ ನಿರೋಧಕ ಶಕ್ತಿ ಹಣ್ಣುಗಳಲ್ಲಿದ್ದು, ಅವುಗಳನ್ನು ಸೇವಿಸಿದರೆ ಆರೋಗ್ಯವಂತರಾಗಿರುತ್ತೀರಿ. ಯಾವ ಹಣ್ಣುಗಳು? ಅದರಿಂದ ಏನೆಲ್ಲಾ ಪ್ರಯೋಜನ ಇದೆ. ನೋಡೋಣ.
ಪರಂಗಿ ಹಣ್ಣು(Papaya) : ಈ ಹಣ್ಣು ಎಲ್ಲಾ ಋತುವಿನಲ್ಲೂ ಇರುವಂತದ್ದು. ಈ ಹಣ್ಣನ್ನು ನಿಮ್ಮ ಡಯಟ್ ಸಮಯದಲ್ಲಿ ಸೇವಿಸಿ, ಇದರಿಂದ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಅಲ್ಲದೆ, ಈ ಹಣ್ಣಿನ ಸೇವನೆಯಿಂದ ತೂಕ ಕೂಡ ನಿಯಂತ್ರಣವಾಗುತ್ತದೆ. ಪರಂಗಿ ಹಣ್ಣು(ಪಪ್ಪಾಯಿ) ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಬೆಸ್ಟ್ ಇಮ್ಯುನಿಟಿ ಬೂಸ್ಟರ್ ಆಗಿದೆ. ನಿಮ್ಮನ್ನು ಆರೋಗ್ಯವಾಗಿರಿಸುತ್ತೆ ಈ ಹಣ್ಣು.
ಸ್ಟ್ರಾಬೆರಿ (strawberry) : ಸ್ಟ್ರಾಬೆರಿ ಹಣ್ಣು ಯಾರಿಗಿಷ್ಟ ಇಲ್ಲ ಹೇಳಿ. ಅದರಿಂದ ವಿವಿಧ ಬಗೆಯ ತಿನಿಸುಗಳು ತಯಾರಾಗುತ್ತೇ. ಬಾಯಿಗೆ ಮಾತ್ರ ಅಲ್ಲ ದೇಹಕ್ಕೂ ಸಿಹಿ ಈ ಸ್ಟ್ರಾಬೆರಿ. ವಸಂತ ಋತುವಿಗೆ ಈ ಹಣ್ಣನ್ನು ಅತ್ಯುತ್ತಮ ಹಣ್ಣು ಎನ್ನಲಾಗುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಬ್ಲ್ಯಾಕ್ಬೆರಿ : ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ಫೈಬರ್ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ಬ್ಲ್ಯಾಕ್ ಬೆರ್ರಿ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಇದರ ಸೇವನೆಯಿಂದ ಮೆದುಳು ಚುರುಕಾಗುತ್ತದೆ. ಅಲ್ಲದೆ, ಇದು ದೇಹದ ಚಯಾಪಚಯವನ್ನು ವೇಗಗೊಳಿಸುತ್ತದೆ. ಹಾಗೇ ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿ, ಶೀತ,ಕೆಮ್ಮು ಇಂತಹ ರೋಗಗಳು ದೂರವಾಗುತ್ತವೆ.
ಚೆರ್ರಿ ಹಣ್ಣು (Cherry): ಆರೋಗ್ಯಕರ ಸೂಪರ್ಫುಡ್ಗಳಲ್ಲಿ ಒಂದು ಎಂದು ಕರೆಯಲ್ಪಡುವ ಚೆರ್ರಿಗಳು ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿವೆ. ಏಕೆಂದರೆ ಹಣ್ಣುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿದೆ. ಈ ಹಣ್ಣುಗಳನ್ನು ಹಲವಾರು ಆರೋಗ್ಯ ಸಮಸ್ಯೆಯ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ಇದರಲ್ಲಿರುವ ಮೆಲಟೋನಿನ್ ಅಂಶ ನಿದ್ರೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದಲ್ಲದೆ, ಚೆರ್ರಿ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ರಕ್ತದಲ್ಲಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿಯಾಗಿದೆ.
ಕಿತ್ತಳೆ ಹಣ್ಣು(orange) : ಕಿತ್ತಳೆಯು ಚಳಿಗಾಲದ ಋತುಮಾನದ ಹಣ್ಣಾಗಿದೆ. ಇದನ್ನು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಡಿ, ಮತ್ತು ವಿಟಮಿನ್ ಎ ಸತ್ವ ಅಡಗಿದೆ. ಜೊತೆಗೆ ಹಲವು ಸಂಯುಕ್ತಗಳಾದ ಕ್ಯಾರೋಟಿನಾಯಡ್ಸ್ ಮತ್ತು ಪ್ಲೆವೊನಾಯಡ್ಸ್ ಗಳು ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆ. ಇದರಿಂದ ಸೊಂಕುಗಳು ಬಾರದಂತೆ ತಡೆಯಬಹುದಾಗಿದೆ. ಶೀತ ಮತ್ತು ಜ್ವರದಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು ಮತ್ತು ಇದರಿಂದಾಗುವ ಹಾನಿಯನ್ನು ಕಡಿಮೆ ಮಾಡಲು ಸಹ ನೆರವಾಗುತ್ತದೆ. ಇವುಗಳು ಬೆಸ್ಟ್ ಇಮ್ಯುನಿಟಿ ಬೂಸ್ಟರ್ ಹಣ್ಣುಗಳಾಗಿವೆ.
