ಈ ಆಧುನಿಕ ಯುಗದಲ್ಲಂತೂ ಜನರ ಆಸೆ ಆಕಾಂಕ್ಷೆಗಳಿಗೆ ಮಿತಿಇಲ್ಲ. ಅದರಲ್ಲೂ ಆ ಆಸೆಗಳೆಲ್ಲವೂ ಆಗಾಗ ಬದಲಾಗುತ್ತಿರುತ್ತವೆ. ಆ ಬದಲಾವಣೆಗೆ ತಕ್ಕಂತೆ ಜಗತ್ತು, ಅದರಲ್ಲಿರುವ ಎಲ್ಲವೂ ಬದಲಾಗುತ್ತಿರುತ್ತದೆ ಅಲ್ವಾ? ಅರೆ ಈ ಬದಲಾವಣೆಗಳ ವಿಚಾರ ಯಾಕಪ್ಪಾ ಬಂತು ಇಲ್ಲಿ ಅಂದ್ಕೊಳ್ತಿದ್ದೀರಾ? ಇದರಲ್ಲೂ ಒಂದು ಇಂಟ್ರೆಸ್ಟಿಂಗ್ ವಿಷಯ ಇದೆ ಕೇಳಿ. ಈ ಬದಲಾವಣೆಗಳ ಕಾಲದಲ್ಲೂ ಇಲ್ಲೊಂದು ಹೋಟೆಲ್ ಸುಮಾರು ನೂರು ವರ್ಷಗಳಿಗೂ ಹೆಚ್ಚು ಕಾಲ ತನ್ನ ಮೆನುವನ್ನೇ ಬದಲಾಯಿಸಿಲ್ಲವಂತೆ! ಇದು ನಿಮಗೆ ನಂಬೋಕ ಸಾದ್ಯವಾಗದಿದ್ರೂ ಸತ್ಯದ ವಿಚಾರ. ಇದರ ಬಗ್ಗೆ ತಿಳ್ಕೋಬೇಕಾದ್ರೆ ಕಂಪ್ಲೀಟ್ ಈ ಸ್ಟೋರಿ ನೋಡಿ.
ಈಗಂತೂ ಹಳೆಯ ಬಿಲ್ಲು, ಹಳೆತ ಟಿಕೆಟ್, ಹೋಟೆಲ್ಗಳ ಹಳೆ ಮೆನುಗಳ ಪರ್ವ! ಕೆಲವು ದಿನಗಳ ಹಿಂದಷ್ಟೇ ಇವುಗಳ ಬಗ್ಗೆ ನಾವು ತಿಳಿದುಕೊಂಡಿದ್ವಿ. ಆದರೆ ಅವೆಲ್ಲವೂ ಹಳೆಯದಾಗಿದ್ದವು ಮತ್ತು ಇಂದಿನ ಸ್ಥಿತಿಗೆ ತಕ್ಕಂತೆ ಬದಲಾಗಿವೆ. ಆದರೆ ನಾವಿಲ್ಲಿ ಹೇಳಹೊರಟಿರುವ ಮೆನು ಮಾತ್ರ ನೂರು ವರ್ಷಗಳಿಂದ ಬದಲಾಗದೆ, ಅಂದಿದ್ದಂತೆ ಇಂದಿಗೂ ಹಾಗೆಯೇ ಇರುವಂತದ್ದು! ಒಂದೇ ಆಹಾರವನ್ನು ನಮ್ಮಿಂದ ಎಷ್ಟು ಸಾರಿ ತಿನ್ನೋಕೆ ಸಾಧ್ಯ? ಒಂದೇ ರೀತಿಯ ಫುಡ್ ಸಿಗುತ್ತೆ ಅಂದ್ರೆ ನಾವು ಆ ಹೊಟೇಲ್‌ಗೆ ಹೋಗೋದನ್ನೇ ಬಿಡ್ತೀವಿ. ಅಲ್ಲದೆ ನಾವು ನೋಡಿರುವ ಹಳೆ ಹೋಟೆಲುಗಳು ತಾವು ತಯಾರಿಸೋ ಖಾದ್ಯಗಳನ್ನು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡು ಬಂದಿದ್ದಾವೆ. ಆದರೆ, ಪುಣೆ ನಗರದ ದೋರಬ್ಜಿ ಅಂಡ್ ಸನ್ಸ್ ಎಂಬ ಹೋಟೆಲು 1878ರಿಂದಲೂ ಒಂದೇ ಮೆನುವನ್ನು ಬಳಸುತ್ತಿದೆ!
ಹೌದು, ಪುಣೆಯಲ್ಲಿರುವ ‘ಡೋರಾಬ್ಜಿ ರೆಸ್ಟೋರೆಂಟ್’ ಎಂಬ ಈ ಹೋಟೆಲನ್ನು ಡೇರಿಯಸ್ ಎಂಬುವವರು ನೋಡಿಕೊಳ್ಳುತ್ತಿದ್ದು, 1878ರಲ್ಲಿ ಡೇರಿಯಸ್ ಅವರ ಮುತ್ತಜ್ಜ ಸೊರಾಬ್ಜಿ ದೊರಾಬ್ಜಿ ಅವರು ಇದನ್ನು ಆರಂಭಿಸಿದರು. ಈ ಡೋರಾಬ್ಜಿ ರೆಸ್ಟೋರೆಂಟ್ ಬ್ರಿಟಿಷರ ಕಾಲದಲ್ಲಿ ಪುಣೆ ಕಂಟೋನ್ಮೆಂಟ್‌ನಲ್ಲಿ ರುಚಿಕರವಾದ ಆಹಾರ ಸೇವಿಸಲು ಮತ್ತು ಸ್ನೇಹಿತರೊಂದಿಗೆ ಸಂಜೆಯನ್ನು ಕಳೆಯಲು ಉತ್ತಮವಾದ ಏಕೈಕ ಸ್ಥಳವಾಗಿತ್ತು. ಅಲ್ಲದೆ ಇದೀಗ ಅವರು ಹೋಟೆಲಿನಲ್ಲಿ, ಆರಂಭವಾದಾಗ ತಯಾರಿಸ್ತಿದ್ದ ಪಾರ್ಸಿ ರೀತಿಯ ಮಾಂಸಾಹಾರವನ್ನೇ ನೀಡುತ್ತಿದ್ದಾರೆ. ಹೋಟೆಲ್ ಆರಂಭವಾದಾಗಿನಿಂದ ನಾಲ್ಕು ತಲೆಮಾರುಗಳು ರೆಸ್ಟೋರೆಂಟ್ ಅನ್ನು ಮುನ್ನಡೆಸಿದ್ದು, ತಮ್ಮದೇ ವೈಯಕ್ತಿಕ ಸ್ಪರ್ಶದೊಂದಿಗೆ ಪಾರ್ಸಿ ಪಾಕಪದ್ಧತಿಯನ್ನು ಒದಗಿಸುವ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ.
ಸೊರಾಬ್ಜಿಯವರು ಮೂಲತಃ ಗುಜರಾತಿನ ನವಸಾರಿಯವರು. ಅಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಅವಲ ಜೀವನ ಮಾರ್ಗವನ್ನು ಕಂಡುಕೊಳ್ಳಲು ತಮ್ಮ ಸಹೋದರ ಪೆಸ್ಟೋಂಜಿ ದೊರಾಬ್ಜಿಯೊಂದಿಗೆ ಪುಣೆಗೆ ಬಂದರು. ಅವರ ಸಹೋದರ ಪಾರ್ಸಿ ಆಚರಣೆಗಳು ಮತ್ತು ಪದ್ಧತಿಗಳಿಗೆ ಅಗತ್ಯವಾದ ವಸ್ತುಗಳ ಅಂಗಡಿಯನ್ನು ಪ್ರಾರಂಭಿಸಿದಾಗ, ಸೊರಾಬ್ಜಿ ಮೂರು ಬಂಗಲೆಗಳನ್ನು ಬಾಡಿಗೆಗೆ ಪಡೆದು ರೈಲ್ವೇ ನಿಲ್ದಾಣ ಮತ್ತು ರೇಸ್‌ಕೋರ್ಸ್ ನಡುವೆ ಸಂಚರಿಸುವ ಟಾಂಗಾ ವಾಲಾಗಳಿಗೆ ಚಹಾವನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಆರು ತಿಂಗಳೊಳಗೆ, ಅವರು ಗ್ರಾಹಕರ ಬೇಡಿಕೆಯನ್ನು ಗ್ರಹಿಸಿದರು ಮತ್ತು ಪಾರ್ಸಿ ಪಾಕಪದ್ಧತಿಯನ್ನು ನೀಡಲು ಪ್ರಾರಂಭಿಸಿದರು. ಇಂದಿಗೂ ಕೂಡ ಈ ಹೊಟೆಲ್ ನಲ್ಲಿ ಅದೇ ಆಹಾರ ಪದ್ಧತಿ ನಡೆದುಕೊಂಡು ಬರುತ್ತಿದೆ. ಮೊದಲಿದ್ದಂತೇ ಗ್ರಾಹಕರು ಹೆಚ್ಚಿದ್ದು, ಬೇಡಿಕೆಯೂ ಹೆಚ್ಚುತ್ತಿದೆ.
ಇನ್ನು ಇಲ್ಲಿ, ಹೆಚ್ಚಾಗಿ ಹಿರಿಯ ನಾಗರಿಕರೇ ಖಾಯಂ ಗಿರಾಕಿಯಾಗಿದ್ದಾರಂತೆ. ಡೋರಾಬ್ಜಿ ಅಂಡ್ ಸನ್ಸ್‌ನ ಮಾಲೀಕ ಡೇರಿಯಸ್ ಡೊರಾಬ್ಜಿ ಈಗಲೂ ಸಾಕಷ್ಟು ಹಿರಿಯ ನಾಗರೀಕರು ಇಲ್ಲಿಂದ ಆಹಾರ (Food) ಕೊಂಡೊಯ್ಯುತ್ತಿರುವಾಗಿ ಹೇಳಿದ್ದಾರೆ. ಅವರ ತಂದೆ ಮರ್ಜಾಬಾನ್ ದೊರಾಬ್ಜಿ ಅವರು ಹೋಟೆಲ್ ನ ಮಾಲಿಕತ್ವವನ್ನು ಹಿಡಿದಾಗಿನಿಂದ ರೆಸ್ಟೋರೆಂಟ್‌ಗೆ ಬಹಳಷ್ಟು ಹಿರಿಯ ಗ್ರಾಹಕರೇ ಭೇಟಿ ನೀಡುತ್ತಿದ್ದಾರಂತೆ. ಈ ಕುರಿತು ಪ್ರತಿಕ್ರಿಯಿಸಿದ ಅವರು ‘ನಾನು ಇಲ್ಲಿರುವ ಪ್ರತಿಯೊಬ್ಬ ಹಿರಿಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ ಹಾಗೂ ಹೊಂದಲು ಬಯಸುತ್ತೇನೆ. ಏಕೆಂದರೆ ದೊರಾಬ್ಜಿ ಮತ್ತು ಸನ್ಸ್ ಹೊಟೇಲ್ ಬಗ್ಗೆ ಜನರು ಇಟ್ಟಿರುವ ಪ್ರೀತಿಗೆ ಬೆಲೆಕಟ್ಟಲಾಗದು’ ಎಂದು ಹೇಳಿದ್ದಾರೆ.
