ಕರ್ನಾಟಕ ಚುನಾವಣೆಯ ಹಣಾಹಣಿಗೆ ಕೇವಲ ಎರಡೇ ತಿಂಗಳು ಬಾಕಿ ಇರುವ ಹಿನ್ನೆಲೆ ಬಜೆಟ್ ಬಗ್ಗೆ ಜನರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಇದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೊನೆಯ ಬಜೆಟ್ ಆಗಿದ್ದು ಹೀಗಾಗಿ, ಈ ಬಾರಿ ಜನಪರ ಬಜೆಟ್ ಮಂಡಿಸುವ ಸಾಧ್ಯತೆ ದಟ್ಟವಾಗಿದೆ.
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ದವಿರುವ ಕುರಿತು ಸಿಎಂ ಬೊಮ್ಮಾಯಿ ಇತ್ತೀಚೆಗಷ್ಟೆ ತಿಳಿಸಿದ್ದು, ಹಿಂದುಳಿದ ವರ್ಗಗಳ 11 ಅಭಿವೃದ್ಧಿ ನಿಗಮಗಳಿಗೆ 569 ಕೋಟಿ ರೂ. ಅನುದಾನವನ್ನು ಮೀಸಲಿಡುವ ಭರವಸೆ ಕೂಡ ನೀಡಿದ್ದರು.
ಕಳೆದ ಬಾರಿ 2 ಲಕ್ಷದ 65 ಸಾವಿರದ 720 ಕೋಟಿ ರೂಪಾಯಿ ಗಾತ್ರದ ಬಜೆಟ್ನ್ನ ಮಂಡನೆ ಮಾಡಿದ್ದರು. ಈ ವರ್ಷದ ತೆರಿಗೆ ಆದಾಯ ಹೆಚ್ಚಳವಾಗಿರುವುದರಿಂದ ಸಹಜವಾಗಿಯೇ ಬಜೆಟ್ ಗಾತ್ರ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದೆ. ಹಣಕಾಸು ಖಾತೆ ಹೊಂದಿರುವ ಸಿಎಂ ಬೊಮ್ಮಾಯಿ ಅವರಿಗೆ ಇದು 2ನೇ ಬಜೆಟ್ ಮಂಡನೆಯಾಗಿದ್ದು, 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ರೂ. ಸಾಲ ಮಂಜೂರು, ಎಸ್‌ಸಿ-ಎಸ್‌ಟಿ ನಿಗಮಗಳಿಗೆ 795 ಕೋಟಿ ರೂ. ಮೀಸಲಿಡುವುದಾಗಿ ಬೊಮ್ಮಾಯಿಯವರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಮರ್ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಒದಗಿಸುವಕೊಡುವ ನಿರೀಕ್ಷೆ ದಟ್ಟವಾಗಿದೆ. ಇದಲ್ಲದೆ, ಮಾರಣಾಂತಿಕ ಕಾಯಿಲೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಆರ್ಥಿಕ ಭದ್ರತೆ ಒದಗಿಸುವುದಲ್ಲದೆ ಸ್ವಯಂ ನಿವೃತ್ತಿ ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ.
