UNO :ಕರ್ನಾಟಕ ಮಾತ್ರವಲ್ಲ, ಇಡೀ ದೇಶ, ಇಡೀ ವಿಶ್ವವೇ ಹೆಮ್ಮೆ ಪಟ್ಟಂತಹ ಸಿನಿಮಾ ಅಂದ್ರೆ, ರಿಷಬ್ ಶೆಟ್ಟಿ(Rishab Shetty) ನಿರ್ದೇಶನದ ಹಾಗೂ ನಟನೆತ ‘ಕಾಂತಾರ'(Kantara). ಈ ಸಿನೆಮಾ ಕನ್ನಡ ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯಲ್ಲೂ ಮೋಡಿ ಮಾಡಿತ್ತು. ಇಡೀ ಭಾರತೀಯ ಚಿತ್ರ ರಂಗವೇ ಕನ್ನಡ ಸಿನಿಮಾಗಳತ್ತ ತಿರುಗಿ ನೋಡುವಂತೆ ಈ ಕಾಂತರ ಮಾಡಿತ್ತು. ಕಾಂತಾರ ನೋಡಿ ಮೆಚ್ಚದವರಿಲ್ಲ. ಎಲ್ಲರೂ ರಿಷಬ್ ಶೆಟ್ಟಿಯ ಅದ್ಭುತ ನಟನೆಯನ್ನು ಹೊಗಳಿದ್ದರು. ಸಿನಿಮಾ ರಂಗದ ಹಲವು ದಾಖಲೆಗಳನ್ನು ಕಾಂತಾರ ಬ್ರೇಕ್ ಮಾಡಿತ್ತು.
ಕಾಂತರ ರಿಲೀಸ್ ಆದ ಬಳಿಕ ಇತರರು ಕನ್ನಡ ಚಿತ್ರರಂಗವನ್ನು ನೋಡುವ ದೃಷ್ಟಿಯೇ ಬದಲಾಗಿತ್ತು. ಇದರೊಂದಿಗೆ ರಿಷಬ್ ಅವರ ಇಮೇಜ್ ಕೂಡ ಚೇಂಜ್ ಆಯಿತು. ಹಲವಾರು ಪ್ರಶಸ್ತಿಗಳು ಸಿನಿಮಾವನ್ನು, ರಿಷಬ್ ಅವರನ್ನು ಅರಸಿ ಬಂದವು. ಇದೀಗ ವಿಶ್ವ ಸಂಸ್ಥೆ ಕೂಡ ಕನ್ನಡದ ಕಾಂತಾರವನ್ನು, ಅದರ ನಿರ್ದೇಶಕರನ್ನು ಗುರುತಿಸಿದೆ. ಇದೀಗ ವಿಶ್ವಸಂಸ್ಥೆಯ ಸಭೆಯಲ್ಲಿ (UNO) ರಿಷಬ್ ಶೆಟ್ಟಿ ಮಾತನಾಡಲಿದ್ದಾರೆ.
ಹೌದು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯ(UNO) ಸಭೆಯಲ್ಲಿ ಕಾಂತಾರ ಸಿನಿಮಾ ಮತ್ತು ಪರಿಸರ ಸಂರಕ್ಷಣೆ ಕುರಿತು ಕನ್ನಡದಲ್ಲಿ ಮಾತನಾಡಲಿದ್ದಾರೆ. ವಿಶೇಷವಾಗಿ ಮಾ.17ರಂದು ರಿಷಬ್ ಜೊತೆ ವಿಶ್ವಸಂಸ್ಥೆಯ ಸದಸ್ಯರು ಕಾಂತಾರ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಇದು ಭಾರತೀಯ ಚಿತ್ರ ರಂಗವೇ ಹೆಮ್ಮೆ ಪಡುವ ವಿಚಾರ. ಇದರೊಂದಿಗೆ ಕನ್ನಡ ಸಿನಿಮಾಗೆ ಹಾಗೂ ನಟ, ನಿರ್ದೇಶಕನಿಗೆ ಸಿಕ್ಕಂತಹ ಜಗಮನ್ನಣೆಯಾಗಿದೆ.
ಕಾಂತಾರ ಸಿನಿಮಾ ಮೂಲಕ ಕಾಡಂಚಿನ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿರುವ ನಿರ್ದೇಶಕ ರಿಷಬ್ ಶೆಟ್ಟಿ ಇದೇ ವಿಷಯವಾಗಿ ವಿಶ್ವಸಂಸ್ಥೆಯಲ್ಲಿ ಮಾತನಾಡುವ ಸಾಧ್ಯತೆ ಇದೆ. ವಿಶ್ವಸಂಸ್ಥೆಯಲ್ಲಿ ತಮ್ಮತನ ಮೆರೆಯಲಿರುವ ರಿಷಬ್ ಶೆಟ್ಟಿ ಅಲ್ಲಿ ಕನ್ನಡದಲ್ಲಿಯೇ ಮಾತನಾಡಲಿರುವುದು ವಿಶೇಷ. ರಿಷಬ್ ಶೆಟ್ಟಿ, ವಿಶ್ವಸಂಸ್ಥೆಯಲ್ಲಿ ಮಾತನಾಡಲಿರುವ ವಿಷಯವನ್ನು ಕರ್ನಾಟಕ ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾವು ಕಳೆದ ವರ್ಷ ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಿತ್ತು. ದೈವಗಳ ಕುರಿತಾದ ಕತೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಅರಣ್ಯ ಇಲಾಖೆ ಹಾಗೂ ಕಾಡಂಚಿನಲ್ಲಿ ವಾಸಿಸುವ ಜನಗಳ ನಡುವಿನ ಸಂಘರ್ಷದ ಬಗ್ಗೆಯೂ ಚಿತ್ರಣವಿತ್ತು. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ದಾಖಲೆಗಳನ್ನು ಮಾಡಿದ್ದು ಕೇವಲ ಹದಿನೈದು ಕೋಟಿಯಲ್ಲಿ ನಿರ್ಮಾಣವಾದ ಸಿನಿಮಾ 400 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದು, ಕಿಶೋರ್, ಅಚ್ಯುತ್ ಕುಮಾರ್ ಅವರುಗಳು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
