SSLC Annual Exam 2023 : 2023ನೇ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ (SSLC Annual Exam 2023) ಮಾರ್ಚ್/ಏಪ್ರಿಲ್ ನಲ್ಲಿ ಮಾಹೆಯಲ್ಲಿ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು (SSLC Exam Hall Ticket) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಬಿಡುಗಡೆ ಮಾಡಿದ್ದು, ಈ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿ, ವಿದ್ಯಾರ್ಥಿಗಳಿಗೆ ಹಂಚುವಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ಮಂಡಲಿ ತಿಳಿಸಿದೆ.
ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಮುಖಾಂತರ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ, ಡೌನ್‌ಲೋಡ್ ಮಾಡಿಕೊಂಡು ಪ್ರವೇಶ ಪತ್ರಗಳ ಸಂಖ್ಯೆಗೆ ಸರಿ ಹೊಂದುತ್ತದಾ? ಎಂದು ಪರಿಶೀಲಿಸಿಕೊಳ್ಳಬೇಕು. ಯಾವುದಾದರು ವಿದ್ಯಾರ್ಥಿಯ ಹಾಲ್ ಟಿಕೇಟ್ ಬಂದಿಲ್ಲದಿದ್ದರೆ, ಸದರಿ ವಿದ್ಯಾರ್ಥಿಯ ವಿವರವನ್ನು ದಾಖಲೆಯೊಂದಿಗೆ ಮಂಡಲಿಗೆ ಕಳುಹಿಸಬೇಕು ಎಂದು ಸೂಚಿಸಿದೆ.
ಹಾಗೆಯೇ ವಿದ್ಯಾರ್ಥಿಯ ಫೋಟೋ, ಸಹಿ ಅಥವಾ ಬೇರೆ ಏನಾದರೂ ತಿದ್ದುಪಡಿಗಳಿದಲ್ಲಿ ಸರಿಯಾದ ದಾಖಲೆಗಳೊಂದಿಗೆ ಮಂಡಲಿಗೆ ನೀಡಿ, ಸರಿಪಡಿಸಿಕೊಳ್ಳಬೇಕು. ಅಂತಹ ತಿದ್ದುಪಡಿ ಇದ್ದು ಸರಿಪಡಿಸಿಕೊಳ್ಳದೇ ಇದ್ದರೆ ಇದರಿಂದ ಮುಂದೆ ವಿದ್ಯಾರ್ಥಿಗೆ ಅಂಕಪಟ್ಟಿಯಲ್ಲಿ ಆಗುವ ತೊಂದರೆಗೆ ಸಂಬಂಧಿಸಿದಂತೆ ಶಾಲಾ ಮುಖ್ಯಸ್ಥರು ಜವಾಬ್ದಾರರಾಗಿರುತ್ತಾರೆ. ಇದರ ಜವಾಬ್ದಾರಿ ಮಂಡಲಿ ಹೊರುವುದಿಲ್ಲ ಎಂದು ತಿಳಿಸಿದೆ.
ತಿದ್ದುಪಡಿಗೆ ಅರ್ಹವಾದ ಪ್ರವೇಶ ಪತ್ರಗಳನ್ನು ಸೂಕ್ತ ತಿದ್ದುಪಡಿ ಮಾಡಿ, ಪರಿಷ್ಕೃತ ಪ್ರವೇಶ ಪತ್ರಗಳನ್ನು ಮಂಡಲಿಯ ವೆಬ್ ಸೈಟ್ ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ವಿದ್ಯಾರ್ಥಿಯ ಭಾವಚಿತ್ರ ಪರೀಕ್ಷೆಗಿಂತ ಮೊದಲು ಬದಲಾವಣೆ ಮಾಡಿದ್ದರೆ ಅದನ್ನು ಮಂಡಲಿ ಪರಿಗಣಿಸುತ್ತದೆ. ಆದರೆ, ಪರೀಕ್ಷೆಯ ನಂತರದಲ್ಲಿ ಅಥವಾ ಒಂದು ಪರೀಕ್ಷೆ ಆದ ನಂತರ ವಿದ್ಯಾರ್ಥಿಗಳ ಭಾವಚಿತ್ರ ಬದಲಾವಣೆಯ ಬಗ್ಗೆ ಬರುವ ಯಾವುದೇ ಮನವಿಗಳನ್ನು ಮಂಡಲಿ ಪುರಸ್ಕರಿಸುವುದಿಲ್ಲ ಎಂದು ತಿಳಿಸಿದೆ.
ವಿದ್ಯಾರ್ಥಿಗಳ ಹಾಲ್ ಟಿಕೆಟ್ ನಲ್ಲಿ ವಿದ್ಯಾರ್ಥಿಯ ಹೆಸರು, ತಾಯಿ ಹೆಸರು, ಭಾವಚಿತ್ರ, ಸಹಿ ಇನ್ನಿತರೆ ತಿದ್ದುಪಡಿಗಳಿದ್ದಲ್ಲಿ, ಸಿಸಿಇಆರ್‌ಎಫ್ ವಿದ್ಯಾರ್ಥಿಗಳಿಗೆ ಎಸ್ ಎ ಟಿ ಎಸ್ ನಲ್ಲಿ ತಿದ್ದುಪಡಿ ಮಾಡಿದ ಪ್ರತಿ ಮತ್ತು ಇತರೆ ದಾಖಲೆಗಳೊಂದಿಗೆ ಪ್ರತಿ ತಿದ್ದುಪಡಿಗೆ ರೂ. 100/- ದಂಡ ಶುಲ್ಕ ಇರುತ್ತದೆ. ಇದನ್ನು ನೆಫ್ಟ್ ಚಲನ್ ಮೂಲಕ ಪಾವತಿಸಬೇಕು. ಇದು ದಿನಾಂಕ 24-03-2023 ರೊಳಗೆ ಮಂಡಳಿಗೆ ತಲುಪಬೇಕು, ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಮಂಡಳಿ ಸೂಚಿಸಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಮತ್ತು ಪೋಷಕರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧಿಕೃತ ವೆಬ್‌ಸೈಟ್ https://kseab.karnataka.gov.in/ ಗೆ ಭೇಟಿ ನೀಡಬಹುದು.
