Baba ramdev: ಈ ಹಿಂದೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ದಾರ್ಶನಿಕರ ಸಭೆಯೊಂದರಲ್ಲಿ ಪ್ರಚೋದನಕಾರಿ ಹೇಳಿಕೆಗಳ ಮೇಲೆ ದ್ವೇಷವನ್ನು ಉತ್ತೇಜಿಸಿದ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಬಾಬಾ ರಾಮ್‌ದೇವ್ (baba ramdev) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಅಲ್ಲದೆ, ಯೋಗ ಗುರು ರಾಮದೇವ್ ಈ ಹಿಂದೆ ಅಲೋಪತಿ ಔಷಧದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು, ಇದೀಗ ಮತ್ತೆ ವಿವಾದ ಸೃಷ್ಟಿಸಿದ್ದಾರೆ.
ಯೋಗ ಗುರು ಉತ್ತರಾಖಂಡ ಆಯುರ್ವೇದ ವಿಶ್ವವಿದ್ಯಾನಿಲಯ ಮತ್ತು ದೀನದಯಾಳ್ ಕಾಮಧೇನು ಗೌಶಾಲ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಆಯುರ್ವೇದ ಕಾನ್ಕ್ಲೇವ್-2023 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಈ ವೇಳೆ ತಮ್ಮ (ಪತಂಜಲಿ) ಸಂಸ್ಥೆಯಲ್ಲಿ (pathanjali) ಗೋಮೂತ್ರದ ಸಾರ ಮತ್ತು ಆಯುರ್ವೇದ ಔಷಧಗಳ ಸಂಯೋಜನೆಯಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸಲಾಗಿದೆ ಎಂದು ಹೇಳಿದ್ದು, ಜೊತೆಗೆ ಆಯುರ್ವೇದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಯೋಗ ಗುರು, ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಅಲೋಪತಿಯಲ್ಲಿ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಆಯುರ್ವೇದದ ಮೂಲಕ ಅವುಗಳನ್ನು ಮೂಲದಿಂದಲೇ ನಿರ್ಮೂಲನೆ ಮಾಡಬಹುದು ಎಂದು ಹೇಳಿದರು.
ಯೋಗ ಗುರು ರಾಮದೇವ್ ಈ ಹಿಂದೆ ಅಲೋಪತಿ ಔಷಧದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಕೋವಿಡ್‌ನ 2ನೇ ಅಲೆಯ ವೇಳೆ ದೇಶಾದ್ಯಂತ ಸಾವಿರಾರು ಜನರು ಬಲಿಯಾದಾಗ, ರಾಮ್‌ದೇವ್ ಅವರು ‘’ಲಕ್ಷಗಟ್ಟಲೆ ಜನರು ಅಲೋಪತಿ ಔಷಧಿಗಳಿಂದ ಮೃತಪಟ್ಟಿದ್ದಾರೆ, ಎಂದು ವಿಡಿಯೋವೊಂದರಲ್ಲಿ ಹೇಳಿದ್ದರು. ಅಲ್ಲದೆ, ಯೋಗ ಗುರುಗಳು ಅಲೋಪತಿಯನ್ನು “ಮೂರ್ಖ ಮತ್ತು ದಿವಾಳಿ” ವಿಜ್ಞಾನ ಎಂದೂ ಕರೆದಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು.
ಅಲ್ಲದೆ, ಬಾಬಾ ರಾಮ್‌ದೇವ್‌ಗೆ ಆಯುರ್ವೇದದ ಬಗ್ಗೆ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡದಂತೆ ದೆಹಲಿ ಹೈಕೋರ್ಟ್ ಹೇಳಿತ್ತು.
