BJP candidate :ಬೆಂಗಳೂರು: ಬಿಜೆಪಿಯಲ್ಲಿ ಅಭ್ಯರ್ಥಿ (BJP candidate) ಆಯ್ಕೆ ಕುರಿತಂತೆ ನಿರಂತರ ಸಭೆ ನಡೆಸುತ್ತಿರುವ ಬಿಜೆಪಿ ಮುಖಂಡರು ಪ್ರತೀ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಕುರಿತು ಅಸಮಾಧಾನ,ಆಕ್ಷೇಪಗಳನ್ನು ದಾಖಲಿಸಿಕೊಂಡಿದ್ದಾರೆ.
ಯಾವುದೇ ಗೊಂದಲವಿಲ್ಲದ 85 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಮಾತ್ರ ಮೊದಲ ಪಟ್ಟಿಯಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಇದರಿಂದಾಗಿ ಹಾಲಿ ಶಾಸಕರ ಪೈಕಿ 24ಕ್ಕೂ ಹೆಚ್ಚು ಮಂದಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ.
ಬಿಜೆಪಿ ಟಿಕೆಟ್ ಪ್ರಕ್ರಿಯೆ ಅಂತಿಮಗೊಳಿಸಲು ಮಂಗಳವಾರ ಹಾಗೂ ಬುಧವಾರ ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ.
ಕೋರ್ ಕಮಿಟಿ ಸಭೆಯಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗುತ್ತದೆ. ಅಂತಿಮ ಪಟ್ಟಿಯನ್ನು ವರಿಷ್ಠರಿಗೆ ರವಾನಿಸಲಾಗುತ್ತದೆ.ಎ.8ರಂದು ದಿಲ್ಲಿಯಲ್ಲಿ ಸಂಸದೀಯ ಮಂಡಳಿ ಸಭೆಗೆ ದಿನಾಂಕ ನಿಗದಿಯಾಗಿದ್ದು, ಅದೇ ದಿನ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.
ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲೇ ಹಾಲಿ ಶಾಸಕರ ಬದಲು ಪರ್ಯಾಯ ಹೆಸರುಗಳು ಪ್ರಸ್ತಾವವಾಗಿವೆ.
ಜತೆಗೆ 85 ಹೆಸರುಗಳು ಮಾತ್ರ ಮೊದಲ ಪಟ್ಟಿಯಲ್ಲಿ ಪ್ರಕಟಗೊಳ್ಳಲಿದೆ.
ಈ ಮಧ್ಯೆ ಟಿಕೆಟ್ ವಂಚಿತ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳಿಂದ ಸುಮಾರು 25 ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಾಗಬಹುದೆಂದು ಪಕ್ಷದ ರಾಜ್ಯ ಘಟಕ ನಿರೀಕ್ಷಿಸಿದೆ. ಅಸಮಾಧಾನ ಶಮನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ತೆರೆಮರೆಯಲ್ಲೇ ಸಿದ್ಧತೆ ನಡೆಸಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಆದಂತೆ ಬಂಡಾಯ ಅಭ್ಯರ್ಥಿಗಳೇ ಅಧಿಕೃತ ಅಭ್ಯರ್ಥಿಯ ಸೋಲು ನಿರ್ಧರಿಸದಂತೆ ಜಾಗ್ರತೆ ವಹಿಸಿ ಎಂದು ವರಿಷ್ಠರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಎ. 15ರ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸುಮಾರು 20 ದಿನಗಳ ಕಾಲ ಬೆಂಗಳೂರಿನಲ್ಲೇ ನೆಲೆಸಲಿರುವ ಅವರು ಪಕ್ಷದ ತಂತ್ರಗಾರಿಕೆ, ಪ್ರಚಾರ, ಭಿನ್ನಮತ ಶಮನ ಕಾರ್ಯ ಕುರಿತಾಗಿ ಯೋಜನೆ ರೂಪಿಸಲಿದ್ದಾರೆ.
