Fertility surgery : ಹಿಂದೆಲ್ಲಾ ತಿಳುವಳಿಕೆ ಕಡಿಮೆ ಇರುವಂತಹ ದಂಪತಿಗಳು ಬೇಕಾಬಿಟ್ಟಿ ಮಕ್ಕಳನ್ನು ಹೆರುತ್ತಿದ್ದರು. 10-15 ಮಕ್ಕಳು ಒಂದೇ ದಂಪತಿಗಳಿಗೆ ಆಗುತ್ತಿದ್ದವು. ಅಂತಹ ಸಮಯದಲ್ಲೆಲ್ಲ ವೈದ್ಯಾಧಿಕಾರಿಗಳು ಮನೆ ಮನೆಗೆ ತೆರಳಿ ಅವರ ಮನವೊಲಿಸಿ ಮಕ್ಕಳಾಗದಂತೆ (Fertility surgery) ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುತ್ತಿದ್ದರು. ಕೆಲವರು ಕದ್ದು ಓಡಿ ಹೋಗುತ್ತಿದ್ದದ್ದು ಉಂಟು. ಆದರೂ ಅವರ ಬೆನ್ನು ಬಿದ್ದು ಅದನ್ನು ಮಾಡಿ ತೀರುತ್ತಿದ್ದರು. ಆದರೆ ಈ ರೀತಿಯ ಪ್ರಕರಣಗಳು ಇಂದಿಗೂ ಜೀವಂತವಾಗಿರುವುದು ದುರಂತ.
ಯಾಕೆಂದರೆ ಇಲ್ಲೊಂದು ದಂಪತಿ ಈಗಾಗಲೇ 12 ಮಕ್ಕಳಿಕೆ ಜನ್ಮ ನೀಡಿದೆ. ಹಿರಿಯ ಮಗನಿಗೆ ಈಗ 25 ವರ್ಷ ವಯಸ್ಸಾಗಿದೆ ಮತ್ತು ಆತನಿಗೆ ಮದುವೆಯಾಗಿ ಮಗುವಾಗಿದೆ. ಆದರೂ ಕಳೆದ ವಾರ ಇವನ ತಾಯಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಲ್ಲಿಗೆ ಬರೋಬ್ಬರಿ 13 ಮಕ್ಕಳಿಗೆ ಜನ್ಮ ನೀಡಿದಂತಾಗಿದೆ. ಆದರೀಗ ಕೊನೆಗೂ 13 ಮಕ್ಕಳ ತಂದೆಗೆ ಮನವೋಲಿಸಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವಲ್ಲಿ ವೈದ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹೌದು, ಈರೋಡ್ನ ಮಾದಯ್ಯನ್(46) ಮತ್ತು ಶಾಂತಿ(40) ದಂಪತಿ ಈಗಾಗಲೇ 12 ಮಕ್ಕಳನ್ನು ಹೊಂದಿದ್ದಾರೆ. ಧಾರ್ಮಿಕ ಸಂಪ್ರದಾಯ ಎಂಬ ಕಾರಣಕ್ಕೆ ದಂಪತಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಮೊದಲು ಒಪ್ಪಿಗೆ ಸೂಚಿಸಿರಲಿಲ್ಲ. ಇವರಿಗೆ ಈಗಾಗಲೇ 7 ಗಂಡು ಮತ್ತು 5 ಹೆಣ್ಣು ಮಕ್ಕಳು ಇದ್ದಾರೆ. ಕಳೆದ ವಾರ ಶಾಂತಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇದೀಗ ವೈದ್ಯಾಧಿಕಾರಿಗಳು ಪೊಲೀಸರ ಸಹಾಯ ಪಡೆದು, ಮೂರು ದಿನಗಳ ಕಾಲ ಆತನನ್ನು ಮನವೋಲಿಸಿ ಚಿಕಿತ್ಸೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ
ಅಂದಹಾಗೆ 13ನೇ ಮಗುವಿನ ಜನನದ ವೇಳೆ ಶಾಂತಿ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದಳು. ಮತ್ತೊಮ್ಮೆ ಗರ್ಭಿಣಿಯಾಗದರೆ, ಹೆರಿಗೆಯ ವೇಳೆ ಆಕೆಯ ಪ್ರಾಣಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಆಕೆಯ ಗಂಡನಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಬಗ್ಗೆ ದಂಪತಿಗೆ ಮನವರಿಕೆ ಮಾಡಿಕೊಟ್ಟು, ಈರೋಡ್ ಜಿಲ್ಲೆಯ ಅಂದಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಾದಯ್ಯನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಬ್ಲಾಕ್ ವೈದ್ಯಾಧಿಕಾರಿ ಕೆ.ಶಾಂತಿ ಕೃಷ್ಣನ್ ತಿಳಿಸಿದ್ದಾರೆ.
