7th- Pay Commission : ಈಗಾಗಲೇ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದ್ದು , ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಹಣಕಾಸು ವರ್ಷವು ಉತ್ತಮವಾಗಿರಲಿದೆ ಎಂಬ ಸುದ್ದಿ ನಿಜವಾಗಿದೆ. ಹೌದು, ಕೇಂದ್ರ ನೌಕರರು ಬಹಳ ದಿನಗಳಿಂದ ಇರಿಸಿದ್ದ ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ ಈಡೇರಿದೆ.
ಪ್ರಸ್ತುತ, ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಸರ್ಕಾರ ಅನುಮೋದಿಸಿದ್ದು, ಇನ್ನು ನೌಕರರ ವೇತನಕ್ಕೆ ಹೊಸ ತುಟ್ಟಿಭತ್ಯೆ ಸೇರ್ಪಡೆಯಾಗಲಿದೆ. ತುಟ್ಟಿಭತ್ಯೆಯ ಪರಿಷ್ಕೃತ ಅಧಿಸೂಚನೆಯನ್ನು ಹಣಕಾಸು ಸಚಿವಾಲಯ ಈಗಾಗಲೇ ಹೊರಡಿಸಿದ್ದು, ಈ ಬಾರಿ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ನೌಕರರು ಪಡೆಯುವ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ.
ಡಿಎ ಹೆಚ್ಚಳವನ್ನು ಶೇ.4 ರಷ್ಟು ಹೆಚ್ಚಿಸಲು ಹಣಕಾಸು ಸಚಿವಾಲಯ ಸೋಮವಾರ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಮಾರ್ಚ್ 24 ರಂದು, ನೌಕರರ ತುಟ್ಟಿಭತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಇದರೊಂದಿಗೆ ನೌಕರರ ತುಟ್ಟಿ ಭತ್ಯೆ ಶೇ.38ರಿಂದ 42ಕ್ಕೆ ಏರಿಕೆಯಾಗಿದೆ. ಇದೀಗ ಏಪ್ರಿಲ್ 3 ರಂದು ತುಟ್ಟಿ ಭತ್ಯೆ ಹೆಚ್ಚಳದ ಅಧಿಸೂಚನೆಯನ್ನು ಹಣಕಾಸು ಸಚಿವಾಲಯ ಹೊರಡಿಸಿದೆ.
ಜೊತೆಗೆ ಏಳನೇ ವೇತನ ಆಯೋಗದ (7th- Pay Commission) ಅಡಿಯಲ್ಲಿ ಲಕ್ಷಗಟ್ಟಲೆ ಪಿಂಚಣಿದಾರರು ಡಿಯರ್ನೆಸ್ ರಿಲೀಫ್ (ಡಿಆರ್ ಹೆಚ್ಚಳ) ಪ್ರಯೋಜನವನ್ನು ಪಡೆದಿದ್ದಾರೆ. ಡಿಎ ಹೆಚ್ಚಳದ ಜೊತೆಗೆ, ಕ್ಯಾಬಿನೆಟ್ ಡಿಯರ್ನೆಸ್ ರಿಲೀಫ್ (ಡಿಆರ್ ಹೈಕ್) ಅನ್ನು 4 ಪ್ರತಿಶತದಷ್ಟು ಹೆಚ್ಚಿಸಿದೆ. ಪಿಂಚಣಿದಾರರಿಗೆ 42% ದರದಲ್ಲಿ ತುಟ್ಟಿಭತ್ಯೆ ನೀಡಲಾಗುವುದು. ಪಿಂಚಣಿದಾರರ ಪಿಂಚಣಿ ಜತೆಗೆ ಮೂರು ತಿಂಗಳ ಬಾಕಿಯನ್ನೂ ನೀಡಲಾಗುವುದು ಎಂದು ತಿಳಿಸಲಾಗಿದೆ.
ಅಧಿಸೂಚನೆಯ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ ಏಪ್ರಿಲ್ ವೇತನದಲ್ಲಿ ಹೆಚ್ಚಿದ ಶೇಕಡಾ ನಾಲ್ಕು ತುಟ್ಟಿಭತ್ಯೆ ನೀಡಲಾಗುವುದು. ಏಪ್ರಿಲ್ ತಿಂಗಳ ವೇತನದಲ್ಲಿ ಮೂರು ತಿಂಗಳ ಬಾಕಿ ಇರುವ ಡಿಎ ಯನ್ನು ಕೂಡಾ ನೌಕರರ ವೇತನದಲ್ಲಿ ನೀಡಲಾಗುವುದು. ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ಜನವರಿ ಒಂದು 2023 ರಿಂದ ಜಾರಿಗೊಳಿಸಲಾಗಿದೆ. ಅದಲ್ಲದೆ ಸುಮಾರು ಒಂದು ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ಮೂರು ತಿಂಗಳ ಬಾಕಿ ಡಿಎ ಪಾವತಿಸಲಾಗುವುದು ಎಂಬ ಮಾಹಿತಿ ನೀಡಲಾಗಿದೆ.
