Crime News: ಅನೈತಿಕ ಸಂಬಂಧವೆಂದರೇ ಹಾಗೇ, ಅದೊಂದು ರೀತಿಯಲ್ಲಿ ನೀರ ಮೇಲಿನ ಗುಳ್ಳೆಯ ರೀತಿ. ಈ ಸಂಬಂಧದಲ್ಲಿ ಯಾರಿಗೂ ಒಳ್ಳೆದಾಗಲ್ಲ. ಬದಲಿಗೆ ಸಂಸಾರಕ್ಕೆನೇ ದೊಡ್ಡ ಪೆಟ್ಟು. ಇಂತಹ ಹಲವು ಉದಾಹರಣೆಗಳನ್ನು ನಾವು ನೀವು ನೋಡಿರಬಹುದು. ಅಂತಹುದೇ ಒಂದು ಘಟನೆ ಕಳೆದ ಬುಧವಾರ ನಡೆದಿದ್ದು, ಪತಿಯೊಬ್ಬ ತನ್ನ ಹೆಂಡತಿ ವಿವಾಹೇತರ ಸಂಬಂಧ ಹೊಂದಿದ್ದಾಳೆಂಬ ಶಂಕೆಯಲ್ಲಿ ಕುತ್ತಿಗೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ (Crime News) ಘಟನೆಯೊಂದು ಮುಂಬೈನಲ್ಲಿ(Mumbai) ನಡೆದಿದೆ.
ಈ ಘಟನೆ ಕಳೆದ ಬುಧವಾರ ಎಕೆಜಿ ನಗರದ ಗೋಪಾಲ್ ಮಿಸ್ತ್ರಿ ಚಾಲ್‌ನಲ್ಲಿ ನಡೆದಿದೆ. ಆರೋಪಿ ಸುರೇಶ್ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಕೃತ್ಯವನ್ನು ಒಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಈ ಅನೈತಿಕ ಸಂಬಂಧದಲ್ಲಿ ಗೆಳೆಯನ ನೆರಳೇ ಕಂಡಿದ್ದು ಇಷ್ಟು ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗಿದೆ. ಸುರೇಶ್ ವಿಶ್ವಕರ್ಮ ಬಡಗಿ ವೃತ್ತಿ ಮಾಡಿಕೊಂಡಿದ್ದರಿಂದ ಈತ ಯಾವಾಗಲೂ ಮನೆಗೆ ಬರುವುದು ಸರಿಸುಮಾರು ಲೇಟೇ ಆಗುತ್ತಿತ್ತು. ಆದರೆ ಸುರೇಶನ ಹೆಂಡತಿಯ ವಿರಹ ವೇದನೆಯನ್ನು ಕಡಿಮೆ ಮಾಡಿದ್ದು ಮಾತ್ರ ಆತನ ಸ್ನೇಹಿತ. ಇದು ಎಲ್ಲಿಯವರೆಗೆ ಹೋಯಿತು ಎಂದರೆ ತನ್ನ ಮೂರು ವರ್ಷದ ಮಗು ಅಳುತ್ತಿದ್ದರೂ ತಾಯಿಯಾದವಳು ಕ್ಯಾರೇ ಎನ್ನದೇ ಮೊಬೈಲ್‌ನಲ್ಲಿ ಗಂಡನ ಸ್ನೇಹಿತನ ಜೊತೆ ಚಾಟಿಂಗ್ ಮುಂದುವರಿಸಿದ್ದಳು.
ಇದೇ ಕಾರಣ ಈ ಎಲ್ಲಾ ದೊಡ್ಡ ಅವಘಡಕ್ಕೆ ನಾಂದಿಯಾಯಿತು. ಒಂದು ದಿನ ಸುರೇಶ್ ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಬಂದಾಗ ತನ್ನ ಮೂರು ವರ್ಷದ ಮಗು ಅಳುತ್ತಿತ್ತು. ಪಕ್ಕದಲ್ಲಿ ಹೆಂಡತಿ ಇದ್ದರೂ, ಮಗುವಿನ ಕಡೆಗೆ ಗಮನ ಕೊಡದೆ ಮೊಬೈಲ್‌ನಲ್ಲಿ ಚಾಟಿಂಗ್ ಮಾಡ್ತಾ ಇದ್ದ ಹೆಂಡತಿಗೆ ದಬಾಯಿಸಿ, ಮೊಬೈಲ್ ಕಿತ್ತುಕೊಂಡಿದ್ದಾನೆ. ಅಲ್ಲಿ ಆತನಿಗೆ ಆ ಚಾಟ್ ಸ್ನೇಹಿತನ ಜೊತೆ ನಡೆದಿತ್ತು ಎನ್ನುವುದು ಗೊತ್ತಾಗಿದೆ.
ಹೀಗೆ ಗಂಡ ಹೆಂಡತಿ ಮಧ್ಯೆ ವಾಗ್ವಾದ ನಡೆದಿದೆ. ಸಿಟ್ಟಿನಿಂದ ಕೆಲಸದ ಚೂರಿಯಿಂದ ಹೆಂಡತಿಯ ಕತ್ತನ್ನು ಸೀಳಿಬಿಟ್ಟಿದ್ದ. ನಂತರ ಹೊರಗೆ ಬಂದು ನೆರೆಹೊರೆಯವರನ್ನು ಕರೆದು ಆಕೆಯ ಸ್ನೇಹಿತ ಕುತ್ತಿಗೆಗೆ ತಿವಿದು ಪರಾರಿಯಾಗಿದ್ದಾನೆ ಎಂಬ ಕಟ್ಟು ಕಥೆ ಹೇಳಿದ್ದಾನೆ. ನಂತರ ಅವರೆಲ್ಲ ಸೇರಿ ಪ್ರಜ್ಞೆ ತಪ್ಪಿದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ.
ಪ್ರತಿದಿನ ಸುರೇಶ್ ಲೇಟಾಗಿ ಮನೆಗೆ ಬರುತ್ತಿದ್ದರಿಂದ ಆಕೆಯ ಸ್ನೇಹಿತ ಮನೆಗೆ ಬಂದು ಹೋಗುತ್ತಿದ್ದಾನೆ ಎಂಬ ವಿಷಯವನ್ನು ನೆರೆಹೊರೆಯವರು ಆತನಿಗೆ ತಿಳಿಸಿದ್ದರು. ಇದು ಹಲವಾರು ಬಾರಿ ನಡೆದಿತ್ತು. ಮೊನ್ನೆ ಕೂಡಾ ಈ ಘಟನೆ ನಡೆದಾಗ ಫೋನ್ ಕಿತ್ತುಕೊಂಡಾಗ ಅದರಲ್ಲಿ ಕಂಡು ಬಂದಿದ್ದು ಈ ಸ್ನೇಹಿತನ ಚ್ಯಾಟ್.
ಈ ಘಟನೆ ಸಂಬಂಧ ಶಾಹುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುರೇಶ್ ತಪ್ಪೊಪ್ಪಿಕೊಂಡಿದ್ದರಿಂದ ಆತನನ್ನು ಬಂಧಿಸಲಾಗಿದ್ದು. ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಸ್ನೇಹಿತನನ್ನು ಕೂಡಾ ವಿಚಾರಣೆಗೆ ಒಳಪಡಿಸಲಾಗಿದೆ.
