Air india: ವಿಮಾನದೊಳಗೆ ನಾವು ಹಾವು, ಇಲಿ ಇತ್ಯಾದಿಗಳು ಬಂದಿರುವ ಕುರಿತ ಮಾಹಿತಿಗಳನ್ನು ಓದಿರಬಹುದು. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅದೇನೆಂದರೆ ನಾಗ್ಪುರದಿಂದ ಮುಂಬೈಗೆ ತೆರಳುತ್ತಿದ್ದ ಏರ್‌ಇಂಡಿಯಾ ವಿಮಾದಲ್ಲಿ ಚೇಳೊಂದು ಕಂಡು ಬಂದಿದ್ದು ಮಾತ್ರವಲ್ಲದೇ, ಮಹಿಳೆಯೊಬ್ಬರಿಗೆ ಕುಟುಕಿದ ಘಟನೆ ನಡೆದಿದೆ. ಮಹಿಳೆಯ ಸ್ಥಿತಿ ಈ ಸಂದರ್ಭದಲ್ಲಿ ಹದಗೆಟ್ಟಿತ್ತು. ವಿಮಾನ ಮುಂಬೈ ತಲುಪಿದ ಕೂಡಲೇ ಏರ್‌ಇಂಡಿಯಾ(air india) ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಮಹಿಳೆಯ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿದು ಬಂದಿದೆ. ಈ ಘಟನೆ ಎಪ್ರಿಲ್ 23ರಂದು ನಡೆದಿದೆ.
ಮಾಹಿತಿ ಪ್ರಕಾರ ಮುಂಬೈನಲ್ಲಿ ನೆಲೆಸಿರುವ ಮಹಿಳೆ ಯಾವುದೋ ಕೆಲಸದ ನಿಮಿತ್ತ ನಾಗ್ಪುರಕ್ಕೆ ಬಂದಿದ್ದರು. ಆಕೆ ಹಿಂದಿರುಗಲು ಏರ್ ಇಂಡಿಯಾದ ನಾಗ್ಪುರ ಮುಂಬೈ ವಿಮಾನ (AI 630) ಕ್ಕೆ ಬಂದಿದ್ದರು. ನಿಗದಿತ ಸಮಯಕ್ಕೆ ಮಹಿಳೆ ತನ್ನ ಸೀಟಿನಲ್ಲಿ ಕುಳಿತುಕೊಂಡಿದ್ದು, ನಿಗದಿತ ಸಮಯಕ್ಕೆ ವಿಮಾನವೂ ಹೊರಟಿದೆ. ವಿಮಾನವು ಮೇಲೆರಿದ ನಂತರ, ಇದ್ದಕ್ಕಿದ್ದಂತೆ ಮಹಿಳೆ ಕಿರುಚಲು ಪ್ರಾರಂಭಿಸಿದ್ದು, ಗಗನಸಖಿ ತಕ್ಷಣ ಆಕೆಯನ್ನು ವಿಚಾರಿಸಿದಾಗ ಮಹಿಳೆಗೆ ಚೇಳು ಕುಟ್ಟಿರುವುದು ಗೊತ್ತಾಗಿದೆ. ಈ ಸುದ್ದಿ ಕೇಳಿ ಉಳಿದ ಪ್ರಯಾಣಿಕರೂ ಭಯಗೊಂಡಿದ್ದರು.
ತರಾತುರಿಯಲ್ಲಿ ಇಡೀ ವಿಮಾನವನ್ನು ಪರಿಶೀಲಿಸಲಾಗಿತ್ತಾದರೂ ಎಲ್ಲಿಯೂ ಚೇಳು ಪತ್ತೆಯಾಗಲಿಲ್ಲ. ಮತ್ತೊಂದೆಡೆ ಮಹಿಳೆಯ ಸ್ಥಿತಿ ಹದಗೆಟ್ಟಿತ್ತು. ಇಂತಹ ಪರಿಸ್ಥಿತಿಯಲ್ಲಿ ಮುಂಬೈ ವಿಮಾನ ನಿಲ್ದಾಣ ತಲುಪಿದ ಕೂಡಲೇ ಮಹಿಳೆಯನ್ನು ಮೊದಲು ವಿಮಾನದಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆಯ ನಂತರ ಮಹಿಳೆಯ ಆರೋಗ್ಯ ಸುಧಾರಿಸಲು ಪ್ರಾರಂಭಿಸಿತು. ವೈದ್ಯರು ರಾತ್ರಿಯಿಡೀ ಅವರನ್ನು ಆಸ್ಪತ್ರೆಯಲ್ಲಿ ಇರಿಸಿದರೂ ಮರುದಿನ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಈ ಘಟನೆ ಕುರಿತು ಏರ್ ಇಂಡಿಯಾ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ.
ಘಟನೆಯನ್ನು ಖಚಿತಪಡಿಸಿರುವ ಕಂಪನಿಯು ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ. ಮಾಹಿತಿ ಬಂದ ತಕ್ಷಣ ಮಹಿಳೆಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದೆ ಅದೇ ಸಮಯದಲ್ಲಿ, ಮುಂಬೈ ತಲುಪಿದ ನಂತರ, ಆಸ್ಪತ್ರೆಗೆ ದಾಖಲಾದ ನಂತರ ಡಿಸ್ಚಾರ್ಜ್ ಆಗುವವರೆಗೂ ಅವರ ತಂಡವು ಮಹಿಳೆಯೊಂದಿಗೆ ಇದ್ದೆವು ಎಂಬುವುದಾಗಿ ಏರ್ ಇಂಡಿಯಾ ಹೇಳಿದೆ.
ಇದನ್ನೂ ಓದಿ: ಖರ್ಗೆ ಕುಟುಂಬದ ಹತ್ಯೆಗೆ ಸಂಚು! ಬಿಜೆಪಿ ಅಭ್ಯರ್ಥಿಯ ಆಡಿಯೋ ಲೀಕ್
