Marriage: ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿ ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಹಿಡಿದು ತಂದು ಆತನ ತಾಳಿಗೆ ಕುತ್ತಿಗೆ ಕೊಟ್ಟಿದ್ದಾಳೆ ಓರ್ವ ಗಟ್ಟಿಗಿತ್ತಿ ವಧು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆತನನ್ನು ವಧುವು ಮಂಟಪಕ್ಕೆ ಕರೆತಂದು ಮದುವೆಯಾದ (Marriage) ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಆ ಜೋಡಿ ಕಳೆದ ಎರಡು ವರ್ಷಗಳಿಂದ ಪ್ರೀತಿಸಿತ್ತು. ಇನ್ನೇನು ತಾಳಿ ಕಟ್ಟಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ವರ ಯಾಕೋ. ಮನಸು ಬದಲಿಸಿದ್ದಾನೆ. ಮದುವೆ ಮಂಟಪಕ್ಕೆ ಬರುವ ದಾರಿಯಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ವರ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಸುಳಿವು ಅರಿತ ವಧು (Bride) 20 ಕಿ.ಮೀಟರ್ ದೂರಕ್ಕೆ ಆತನನ್ನು ಚೇಸ್ ಮಾಡಿ ಹಿಡಿದಿದ್ದಾಳೆ. ನಂತರ ವರ (Groom) ನನ್ನು ಮಂಟಪಕ್ಕೆ ಕರೆತರುವ ಮೂಲಕ ಚಾಲಾಕಿ ಕೆಲಸ ಮಾಡಿದ್ದಾಳೆ.
ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ನಿವಾಸಿ ಮತ್ತು ಸದರಿ ಯುವತಿ ಕಳೆದ ಎರಡೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದರು. ಕೊನೆಗೆ ಎರಡೂ ಕುಟುಂಬಗಳೂ ಒಪ್ಪಿ ಮದುವೆಯ ದಿನಾಂಕ ಕೂಡಾ ನಿಗದಿಪಡಿಸಲಾಯಿತು. ಮೊನ್ನೆ ಭಾನುವಾರ ಅಲ್ಲಿನ ಭೂತೇಶ್ವರನಾಥ ದೇವಾಲಯದಲ್ಲಿ ಮದುವೆ ಮಾಡುವುದಾಗಿ ನಿರ್ಧಾರ ಸಹಾ ಆಗಿತ್ತು.
ಇತ್ತ ವಧುವಿನ ಕಡೆಯವರು ಮತ್ತು ವರನ ಕಡೆಯವರು ಮತ್ತ ಇತರ ಅತಿಥಿಗಳು ಎಲ್ಲರೂ ಮಂಟಪಕ್ಕೆ ಹಾಜರಾಗಿದ್ದಾರೆ. ವಧು ಕೂಡ ಮದುವೆಯ ಬಗ್ಗೆ ಕನಸು ಕಾಣುತ್ತಾ ಸಿಂಗರಿಸಿಕೊಂಡು ರೆಡಿಯಾಗಿ ಕುಳಿತಿದ್ದಳು. ಆದರೆ ವರ ಮಂಟಪಕ್ಕೆ ಬಾರದೇ ಕಳ್ಳ ತಪ್ಪಿಸಿಕೊಂಡಿದ್ದಾನೆ. ವಧುವಿನ ಕಡೆಯವರು ಕಾಯುತ್ತಾ ಇದ್ದರೂ ವರ ಬಾರದೆ ಇರುವುದರಿಂದ ವಧುವಿಗೆ ಅನುಮಾನಗಳು ಹುಟ್ಟಿಕೊಂಡಿವೆ. ಈ ವೇಳೆ ವರನಿಗೆ ಕರೆ ಮಾಡಿ ಮಂಟಪಕ್ಕೆ ಬರುವಂತೆ ವಧು ಹೇಳಿದ್ದಾಳೆ. ಈ ವೇಳೆ ವರ, ತನ್ನ ತಾಯಿಯನ್ನು ಕರೆದುಕೊಂಡು ಹೋಗಲು ಬುಡೌನ್ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ.
ತಕ್ಷಣ ಯುವತಿಗೆ ಮತ್ತಷ್ಟು ಅನುಮಾನ ಬಂದಿದ್ದು, ವರ ಮದುವೆಯಾಗದೇ ಓಡಿಹೋಗಲು ಮುಂದಾಗಿದ್ದಾನೆ ಎಂಬುದು ವಧುವಿಗೆ ಅರಿವಾಗಿದೆ. ಹೀಗಾಗಿ ಒಂದು ಕ್ಷಣವೂ ವ್ಯರ್ಥ ಮಾಡದೆ, ಬರೇಲಿಯಿಂದ ಸುಮಾರು 20 ಕಿಲೋ ಮೀಟರ್ ದೂರದ ಭೀಮೋರಾ ಪೊಲೀಸ್ ಠಾಣೆ ಬಳಿ ಬಸ್ ಸ್ಟ್ಯಾಂಡ್ ವರೆಗೆ ಹುಡುಕಿಕೊಂಡು ಹೋಗಿದ್ದು, ಬಸ್ ಹತ್ತುವಾಗ ಆತನನ್ನು ಹಿಂಬಾಲಿಸಿ ಹಿಡಿದಿದ್ದಾಳೆ. ಅಷ್ಟರಲ್ಲಿ ದೊಡ್ಡ ಸಂಖ್ಯೆಯ ಜನರು ಅಲ್ಲಿ ಜಮಾಯಿಸಿದ್ದಾರೆ. ಮೊದಲಿಗೆ ಮದುವೆಯಾಗಲು ಹಿಂಜರಿಯುತ್ತಿದ್ದ ಆತ ಕೊನೆಗೆ ತಾಳಿ ಕಟ್ಟಲು ಒಪ್ಪಿದ್ದಾನೆ. ನಂತರ ಅವರಿಬ್ಬರ ಮದುವೆ ಮೊದಲೇ ನಿಗದಿ ಆದಂತೆ ಸ್ಥಳೀಯ ಭೀಮೋರ ದೇವಸ್ಥಾನದಲ್ಲಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಚೇಸ್ ರಾಣಿ ನಾಚಿಕೊಂಡು ಗಂಡನ ಮನೆ ಸೇರಿದ್ದಾಳೆ.
