Congress Guarantee Postponed: ರಾಜ್ಯದಲ್ಲಿ ‘ 5 ಗ್ಯಾರಂಟಿಗಳ ‘ ಗ್ಯಾರಂಟಿಯ ಆಧಾರದ ಮೇಲೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆ ವೇಳೆ ಜನರಿಗೆ ನೀಡಿದ ಉಚಿತ ಕೊಡುಗೆಗಳ ಭರವಸೆಗಳನ್ನು ಈಡೇರಿಸಲು ಪರದಾಡುತ್ತಿದೆ. ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ನೀಡಿದ್ದು, ಅವುಗಳು -ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ಉಚಿತ, ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ ಮತ್ತು ನಿರುದ್ಯೋಗಿ ಯುವ ಡಿಪ್ಲೋಮಾ ಮತ್ತು ಪದವೀಧರರಿಗೆ ಧನಸಹಾಯ – ಇವುಗಳನ್ನು ಪಕ್ಷ ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಘೋಷಿಸಿದೆ.
ಈ ಐದೂ ‘ಗ್ಯಾರಂಟಿ’ಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ, ಎರಡನೇ ಸಚಿವ ಸಂಪುಟ ಸಭೆ ಬಳಿಕವೂ ಈ ಗ್ಯಾರಂಟಿ’ ಅನುಷ್ಠಾನದ ಹಂತ ತಲುಪಿಲ್ಲ (Congress Guarantee Postponed) ಎನ್ನಲಾಗುತ್ತಿದೆ. ಈ ಹಿನ್ನೆಲೆ ಜನರು ರೊಚ್ಚಿಗೆದ್ದು, ಕರೆಂಟ್ ಬಿಲ್ ಕಟ್ಟಲ್ಲ, ಮಹಿಳೆಯರು ಬಸ್ ಟಿಕೆಟ್ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಶನಿವಾರ ರಾಜ್ಯದ ನೂತನ ಸಚಿವರಾಗಿ 24 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿದ್ದರಾಮಯ್ಯ (CM Siddaramaiah) ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ. ನಂತರ ಸಚಿವ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ ಗ್ಯಾರಂಟಿ ಜಾರಿ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ತಿಳಿದುಬಂದಿದೆ.
ಸಭೆ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಸಿದ್ದರಾಮಯ್ಯ,“ ಐದು ಗ್ಯಾರಂಟಿಗಳ ಕುರಿತು ಸಂಪುಟದ ಮುಂದಿನ ಸಭೆಯಲ್ಲಿ ವಿವರಗಳನ್ನು ಮಂಡಿಸಲು ಸೂಚಿಸಲಾಗಿದೆ. ಈ ಬಗ್ಗೆ ಚರ್ಚಿಸಿ ಅನುಮೋದನೆ ನೀಡಿ, ಶೀಘ್ರವೇ ಜಾರಿಗೆ ತರಲಾಗುವುದು. ಸರ್ಕಾರವಾಗಿ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ವಿರೋಧ ಪಕ್ಷಗಳು ತಾವು ಕೊಟ್ಟ ಮಾತನ್ನು ಈಡೇರಿಸಿಲ್ಲ. ನಾವು ಹಿಂದೆಯೂ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದೇವೆ. ಈಗಲೂ ಈಡೇರಿಸುತ್ತೇವೆ” ಎಂದು ಹೇಳಿದರು.
ಇನ್ನು ಐದು ಗ್ಯಾರಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಒಂದು ತಿಂಗಳ ಗಡುವು ವಿಧಿಸಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, “ರಾಜ್ಯ ಸರ್ಕಾರವು ಒಂದು ತಿಂಗಳ ಒಳಗೆ ಗ್ಯಾರಂಟಿಗಳನ್ನು ಈಡೇರಿಸದೇ ಇದ್ದಲ್ಲಿ, ರಾಜ್ಯಾದ್ಯಂತ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ” ಎಂದು ಹೇಳಿದರು.
