Gujarat: ಅರೇ, ಇದೇನಿದು. ತನ್ನಿಷ್ಟದ ಬಟ್ಟೆ, ಕನ್ನಡಕ ಹಾಕಿದ್ದಕ್ಕೆ ದಲಿತ ವ್ಯಕ್ತಿಯನ್ನು ಥಳಿಸೋದಾ? ಇದೆಂಥಾ ವಿಷಯ? ಹೌದು, ಇದು ಸತ್ಯ. ಈ ಘಟನೆ ಗುಜರಾತ್‌ನ (Gujarat) ಬನಸ್ಕಾಂಥ ಜಿಲ್ಲೆಯಲ್ಲಿ ನಡೆದಿದೆ. ಮೇ.30ರ ರಾತ್ರಿ ಪಾಲನಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ವ್ಯಕ್ತಿಯೋರ್ವ ನಿಂತಿದ್ದಾಗ ಏಳು ಮಂದಿ ಬಂದು ನೀನು ಬಾರೀ ಶೋಕಿ ಮಾಡುತ್ತೀಯಾ, ಎಂದು ನಿಂದಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿ ಥಳಿಸಿದ್ದಾರೆ. ಈ ಘಟನೆ ಕುರಿತು ಈಗ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಘಟನೆ ನಡೆದ ರಾತ್ರಿಯಂದು ರಜಪೂತ ಉಪನಾಮ ಹೊಂದಿರುವ ಸಮುದಾಯದ 7 ಆರೋಪಿಗಳು ಗ್ರಾಮದ ದೇವಸ್ಥಾನದ ಹೊರಗೆ ನಿಂತ ವ್ಯಕ್ತಿಯನ್ನು ನೋಡಿ, ಕೋಲುಗಳನ್ನು ಹಿಡಿದುಕೊಂಡು ಬಂದು ಏಕೆ ಒಳ್ಳೆಯ ಬಟ್ಟೆ, ಕನ್ನಡಕ ಧರಿಸಿದ್ದೀಯ ಎಂದು ಪ್ರಶ್ನಿಸಿ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಕೂಡಲೇ ಅಲ್ಲೇ ಇದ್ದ ಆತನ ತಾಯಿ ಆತನನ್ನು ರಕ್ಷಿಸಲು ಮುಂದೆ ಬಂದಿದ್ದು, ಆಕೆಯ ಮೇಲೂ ಗುಂಪು ಹಲ್ಲೆ ಮಾಡಿದೆ. ಆಕೆಯ ಬಟ್ಟೆಯನ್ನು ಹರಿದು ಆಕೆಗೂ ಕೊಲೆ ಬೆದರಿಕೆ ಹಾಕಲಾಗಿದೆ. ಮಗ ಮತ್ತು ತಾಯಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚೇತರಿಸಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಈ ಘಟನೆ ಸಂಬಂಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: Locker Rules: ಬ್ಯಾಂಕ್ ಲಾಕರ್ ನಿಯಮಗಳು ಬದಲಾಗಿವೆ; ಆರ್‌ಬಿಐ ನಿಯಮ ಏನು? ಒಪ್ಪಂದ ನವೀಕರಿಸುವ ಮೊದಲು ಇದನ್ನು ಓದಿ!
