Basavaraj bommai: ಇತ್ತೀಚೆಗೆ ಪಶುಸಂಗೋಪನ ಸಚಿವ ಕೆ ವೆಂಕಟೇಶ್(K Venkatesh) ಮಾತನಾಡಿ ಎಮ್ಮೆ, ಕೋಣ ಕಡಿಯೋದಾದ್ರೆ ಹಸುವನ್ನ ಯಾಕೆ ಕಡಿಬಾರ್ದು ಎಂದು ಹೇಳಿಕೆ ನೀಡಿ ಚರ್ಚೆಗೆ ಕಾರಣವಾಗಿದ್ದರು. ಇದೀಗ ಸಚಿವರ ಮಾತಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Ex CM Basavaraj bommai) ತಿರುಗೇಟು ನೀಡಿದ್ದಾರೆ.
ಹೌದು, ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ(Mysore) ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಎಮ್ಮೆ, ಕೋಣ ಕಡಿಯೋದಾದ್ರೆ ಹಸುವನ್ನ ಯಾಕೆ ಕಡಿಬಾರ್ದು ಎಂದು ಪ್ರಶ್ನಿಸಿ, ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ. ಹಾಗೆಯೇ ಗೋಶಾಲೆಗಳನ್ನು ನಿರ್ವಹಣೆ ಮಾಡಲು ಹಣದ ಕೊರತೆಯಿಲ್ಲ ಎಂದು ಹೇಳಿದ್ದರು. ಇದೀಗ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಅವರು ವೆಂಕಟೇಶ್ ಅವರ ಹೇಳಿಕೆ ಖಂಡನೀಯವಾದದ್ದು ಎಂದು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಗೋವಿನೊಂದಿಗೆ ಭಾರತೀಯರಾದ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ. ಸಚಿವ ಕೆ. ವೆಂಕಟೇಶ್ ಅವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ, ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೋ ಅಥವಾ ಹೈ ಕಮಾಂಡ್ ಮೆಚ್ಚಿಸಲೊ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಅಲ್ಲದೆ ಗೋಹತ್ಯೆ ನಿಷೇಧವನ್ನು ಮೊದಲು ಪ್ರತಿಪಾದಿಸಿದ್ದು ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ(Mahatma gandhiji). ಅವರು ಪ್ರತಿಪಾದಿಸಿದ ಗೋಹತ್ಯೆ ನಿಷೇಧವನ್ನು 1960 ರ ದಶಕದಲ್ಲಿ ಹಲವಾರು ರಾಜ್ಯಗಳಲ್ಲಿ ಕಾನೂನು ತರಲಾಗಿದೆ. ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ, ಸಾಮೂಹಿಕ ಗೋ ಹತ್ಯೆ ಮಾಡುವ ಕಾನೂನು ಬಾಹಿರ ಕಾರ್ಖಾನೆಗಳು ತಲೆ ಎತ್ತಲಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ತಡೆಗಟ್ಟಲು ಕಾನೂನು ತರಲಾಗಿದೆ. ಕರ್ನಾಟಕದಲ್ಲಿ ಹೊಸ ಕಾಯಿದೆ ತಂದಿಲ್ಲ. ಇರುವ ಕಾನೂನಿಗೆ ಬಲ ತುಂಬಿದ್ದೇವೆ ಎಂದು ತಿಳಿಸಿದ್ದಾರೆ.
