Ullal : ಮೆಹಂದಿ ಶಾಸ್ತ್ರದಂದು ಶಾಸ್ತ್ರಕ್ಕೆಂದು ಹಣ್ಣು ತರಲು ಹೋದ ವರ ನಾಪತ್ತೆಯಾದ ಘಟನೆ ಈಗ ಸುಖಾಂತ್ಯ ಕಂಡಿದೆ. ಮೆಹಂದಿ ಶಾಸ್ತ್ರದಂದು ನಾಪತ್ತೆಯಾಗಿದ್ದ ವರ ವರ್ಕಾಡಿ ದೇವಂದಪಡುವಿನ ಕಿಶನ್‌ನನ್ನು ಕೊಣಾಜೆ (Ullal) ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದು, ಮನೆ ಮಂದಿಗೆ ಒಪ್ಪಿಸಿದ್ದಾರೆ.
ಗಡಿಭಾಗದ ವರ್ಕಾಡಿ ದೇವಂದಪಡ್ಡು ನಿವಾಸಿ, ಉದ್ಯಮಿ ಐತಪ್ಪ ಶೆಟ್ಟಿ ಅವರ ಮಗ ಕಿಶನ್ ಶೆಟ್ಟಿ ಅವರೇ ಮೇ.31ರಂದು ಮೆಹಂದಿ ಶಾಸ್ತ್ರದಂದು ನಾಪತ್ತೆಯಾದ ವರ. ಇವರು ಕಾಣೆಯಾದಾಗಿನಿಂದ ಕೆಲವೊಂದು ಊಹಾಪೋಹಗಳು ಸೃಷ್ಟಿ ಉಂಟು ಮಾಡಿತ್ತು. ಕಿಶನ್ ಶೆಟ್ಟಿ ಅವರು ಅನ್ಯಜಾತಿಯ ಯುವತಿಯನ್ನು ಕಾಲೇಜು ಸಮಯದಲ್ಲೇ ಪ್ರೀತಿ ಮಾಡುತ್ತಿದ್ದು, ಆದರೆ ಇತ್ತೀಚೆಗಷ್ಟೇ ಬೇರೊಂದು ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಅನಂತರ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಕಡೆಗಣಿಸಿದ್ದ. ಇದರಿಂದ ಸಿಟ್ಟುಗೊಂಡ ಯುವತಿ ತನ್ನನ್ನು ಬಿಟ್ಟು ಬೇರೆ ಮದುವೆಯಾದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವೆ ಅಥವಾ ಮದುವೆಗೆ ತಡೆಯೊಡ್ಡುವೆ ಎಂದು ಹೇಳಿದ್ದು, ಇದರಿಂದ ಹೆದರಿದ ಕಿಶನ್ ಮೆಹಂದಿ ಶಾಸ್ತ್ರದಂದೇ ನಾಪತ್ತೆಯಾಗಿದ್ದ.
ಈತ ನಾಪತ್ತೆಯಾದ ಕೆಲ ದಿನಗಳ ನಂತರ ತಂಗಿಯ ಮೊಬೈಲ್‌ಗೆ ಮೆಸೇಜ್ ಮಾಡಿದ್ದು, ನಾನು ಬಳ್ಳಾರಿಯಲ್ಲಿದ್ದೇನೆ, ಇನ್ನು ಮುಂದೆ ಮನೆಗೆ ಬರುವುದಿಲ್ಲ ಎಂದು ಸಂದೇಶ ರವಾನಿಸಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ. ಇದರಿಂದ ಮಗನ ಜೀವಕ್ಕೆ ಅಪಾಯವಾಗಿದೆಯೇನೋ ಎಂದು ಮನೆ ಮಂದಿ ಕಣ್ಣೀರಿಟ್ಟಿದ್ದರು. ಈಗ ಈ ಪ್ರಕರಣ ಸುಖಾಂತ್ಯ ಕಂಡಿದ್ದು, ಮನೆಗೆ ಮಗ ಬಂದಿದ್ದರಿಂದ ಮನೆ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ʻಗೃಹಜ್ಯೋತಿ ಯೋಜನೆʼಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ
