Free Bus: ಉಚಿತ ಶಕ್ತಿ ಯೋಜನೆಯಡಿ ಧಾರ್ಮಿಕ ಕ್ಷೇತ್ರ ಪರ್ಯಟನೆ ಹೊರಟು ಧಾರ್ಮಿಕ ಕ್ಷೇತ್ರದ ದರ್ಶನಕ್ಕೆ ಬಂದ ಮಹಿಳೆಯರು ವಾಪಸ್ ಹೋಗಲು ಬಸ್ ಇಲ್ಲದೆ ಪರದಾಟ ನಡೆಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಫ್ರೀ ಆಗಿ (Free Bus) ಬಂದು ದೇವರ ದರ್ಶನ ಏನೋ ಪಡೆದಿದ್ದಾರೆ. ಆದರೆ ವಾಪಸ್ಸು ಬರಲು ಬಸ್ಸಿಲ್ಲದೆ ಪೇಚಾಡುವಂತೆ ಆಗಿದೆ.
ಈ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಧಾರ್ಮಿಕ ಕ್ಷೇತ್ರಕ್ಕೆ ಬಂದ ಮಹಿಳೆಯರು ಮನೆಗೆ ಮರಳಲು ಬಸ್ಗಾಗಿ ಕಾಯುವಂತಾಗಿದೆ. ಹುಬ್ಬಳ್ಳಿ, ಹಾವೇರಿ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಉತ್ತರಕನ್ನಡ ಕಡೆಗೆ ಬಂದಿದ್ದ ಸುಮಾರು 40 ಮಹಿಳೆಯರು ವಾಪಸ್ ಹೋಗುವ ಬಸ್ಸಿಗಾಗಿ ಕಾದು ಕಾದು ನಂತರ ಅಲ್ಲಿನ ಸಾರಿಗೆ ಅಧಿಕಾರಿಗಳಿಗೆ ಬೇಡಿಕೊಂಡಿರುವ ಪ್ರಸಂಗ ನಡೆದಿದೆ.
ಕಾಂಗ್ರೇಸ್ ಗ್ಯಾರಂಟಿ ಉಚಿತ ಪ್ರಯಾಣದ ಮೇರೆಗೆ ಇಲ್ಲಿಗೆ ಬಂದಿರುವ ಈ ಮಹಿಳೆಯರು ಹೊನ್ನಾವರ ಬಸ್ ನಿಲ್ದಾಣದಲ್ಲಿ ಲಾಕ್ ಆಗಿದ್ದಾರೆ. ಅಲ್ಲಿ ಬಸ್ಸಿಗಾಗಿ ದಿನಗಟ್ಲೆ ಕಾದರೂ ಬಸ್ ಮಾತ್ರ ಬಂದಿಲ್ಲ. ಮಹಿಳೆಯರ ಜತೆ ಮಕ್ಕಳು ಕೂಡ ಇದ್ದು, ಎಲ್ಲರೂ ಪರದಾಡುತ್ತಿದ್ದಾರೆ. ವಿವಿಧ ಭಾಗಕ್ಕೆ ತೆರಳುವ ವಾಯವ್ಯ ಸಾರಿಗೆ ಬಸ್ ಸಂಚಾರ ರಾತ್ರಿ 7ಕ್ಕೆ ಕೊನೆ. ಆದರೆ ಉಚಿತ ಪ್ರಯಾಣದ ಉಮ್ಮೆದಿಯಲ್ಲಿ ಬ್ಯಾಗ್ ಜೊತೆ ಮಕ್ಕಳನ್ನು ಬಗಲಲ್ಲಿ ಕಟ್ಟಿಕೊಂಡು ಹೊರಟ ಮಹಿಳೆಯರಿಗೆ ಈ ಮಾಹಿತಿ ಇರದ ಕಾರಣ ಈ ಮಹಿಳೆಯರು ಪ್ರವಾಸಕ್ಕೆ ಬಂದು ವಾಪಸ್ ಹೋಗಲಾಗದೆ ಪರದಾಡುವಂತಾಗಿದೆ. ಕೊನೆ ಪಕ್ಷ ಹೊನ್ನಾವರದಿಂದ ಶಿವಮೊಗ್ಗ ಜಿಲ್ಲೆಗೆ ಬಸ್ ಬಿಡುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿರುವುದು ಕಂಡುಬಂದಿದೆ. ಬಸ್ಸು ಸಿಗದ ಈ ಮಹಿಳಾ ಮಣಿಗಳು ಉಚಿತ ಬಸ್ಸು ಬೇಡ, ಹೋಗುವಾಗ ಟಿಕೆಟ್ ಮಾಡಿ ಹೋಗುತ್ತೇವೆ. ಕೊನೆ ಪಕ್ಷ ಬಸ್ಸುಗಳನ್ನು ಅರೇಂಜ್ ಮಾಡಿ ಎಂದು ಅಧಿಕಾರಿಗಳನ್ನು ಬೇಡಿಕೊಂಡಿದ್ದಾರೆ.
