Shakti Scheme: ರಾಜ್ಯದಲ್ಲಿ ಜಾರಿಯಾಗಿರೋ ಶಕ್ತಿ ಯೋಜನೆಗೆ (Shakti Scheme) (ಮಹಿಳೆಯರ ಉಚಿತ ಬಸ್ ಪ್ರಯಾಣ) ಭರ್ಜರಿಯಾದ ರೆಸ್ಪಾನ್ಸ್ ಸಿಗುತ್ತಿದೆ. ರಾಜ್ಯಾದ್ಯಂತ ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಇದೀಗ ಹೊಸ ಸುದ್ಧಿಯೊಂದು ಹೊರಬಿದ್ದಿದೆ. ಮಹಿಳೆಯರು ಟಿಕೆಟ್ ಪಡೆಯದೇ ಪ್ರಯಾಣಿಸಿದರೆ ದಂಡ ಬೀಳುತ್ತೆ ಎನ್ನಲಾಗಿದೆ.
ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರು ಗುರುತಿನ ಚೀಟಿ (ಆಧಾರ್ ಕಾರ್ಡ್) ತೋರಿಸಿದರೆ, ಅವರಿಗೆ ಶೂನ್ಯ ದರದ ಟಿಕೆಟ್ ನೀಡಲಾಗುತ್ತಿದೆ. ಮಹಿಳೆಯರು ಶೂನ್ಯ ದರದ ಟಿಕೆಟ್ ಪಡೆಯದೇ ಇದ್ದಲ್ಲಿ ದಂಡ ಪಾವತಿಸಬೇಕು.
ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬಸ್ಸಿನಲ್ಲಿ ಮಹಿಳೆಯರೇ ಪೂರ್ತಿ ತುಂಬಿ ಹೋಗಿದ್ದಾರೆ. ಈ ಹಿನ್ನೆಲೆ ನಿರ್ವಾಹಕರು ಟಿಕೆಟ್ ನೀಡಲು ಹರಸಾಹಸಪಡ್ತಿದ್ದಾರೆ. ಅಲ್ಲದೆ, ಈ ಯೋಜನೆ ಜಾರಿಯಾದ ನಂತರ
ಟಿಕೆಟ್ ರಹಿತ ಪ್ರಯಾಣ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಹಾಗಾಗಿ ಬಸ್ಗಳಲ್ಲಿ ತಪಾಸಣೆ ಮಾಡಲು ಬಿಎಂಟಿಸಿ ಎಂಡಿ ಸತ್ಯವತಿ ತನಿಖಾಧಿಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮುಂದಿನ ತಿಂಗಳಿನಿಂದ ಮಹಿಳಾ ಪ್ರಯಾಣಿಕರಿಗೂ ದಂಡ ಹಾಕಲು ಚಿಂತನೆ ನಡೆಸಲಾಗಿದೆ. ಕೆಲವು ಮಹಿಳೆಯರು ಬಸ್ ನಲ್ಲಿ ರಷ್ ಇದೆಯೆಂದೋ? ಉಚಿತ ಪ್ರಯಾಣದ ಹಿನ್ನೆಲೆಯೋ? ಟಿಕೆಟ್ ಪಡೆಯುತ್ತಿಲ್ಲ. ಅಲ್ಲದೆ, ಕೆಲವೆಡೆ ಬೇಕಾಬಿಟ್ಟಿ ಶೂನ್ಯ ದರದ ಟಿಕೆಟ್ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಹಾಗಾಗಿ ಸಾರಿಗೆ ಇಲಾಖೆ ಹೊಸ ಮಾಸ್ಟರ್ ಪ್ಲ್ಯಾನ್ ಗೆ ಮುಂದಾಗಿದೆ.
ಇದೀಗ ಆದಾಯ ಹಿತದೃಷ್ಟಿಯಿಂದ ಮಹಿಳಾ ಪ್ರಯಾಣಿಕರ ಮೇಲೆ ನಿಗಾ ಇರಿಸಲು ಸೂಚನೆ ನೀಡಲಾಗಿದೆ. ಬಿಎಂಟಿಸಿಯಲ್ಲಿ ಟಿಕೆಟ್ ರಹಿತ ಪ್ರಯಾಣ ಪತ್ತೆ ಹಚ್ಚಲು 20 ಭದ್ರತಾ ಮತ್ತು ಜಾಗೃತ ದಳ ರಚನೆ ಮಾಡಲಾಗಿದೆ. ಬಸ್ಗಳಲ್ಲಿ ಟಿಕೆಟ್ ಪಡೆಯದ ಹಾಗೂ ಟಿಕೆಟ್ ನೀಡದ ನಿರ್ವಾಹಕರಿಗೂ ದಂಡ ಬೀಳಲಿದೆ.
