Mumbai: ಮುಂಬೈ: ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇದೀಗ, ಇದೇ ರೀತಿಯ ಮತ್ತೊಂದು ಪ್ರಕರಣ ಮುನ್ನಲೆಗೆ ಬಂದಿದೆ.
ಸ್ಕೂಟರಿನಲ್ಲಿ ಇಬ್ಬರು ಮೂವರು ಎಂದು ಡಬಲ್, ಟ್ರಿಬಲ್ ರೈಡಿಂಗ್ ಮಾಡಿಕೊಂಡು ಹುಚ್ಚು ಸಾಹಸ ಪ್ರದರ್ಶನ ಮಾಡುತ್ತಾ ಪೊಲೀಸರ ಕೈಯಲ್ಲಿ ತಗಾಲಕಿಕೊಂಡು ಫೈನ್ ಕಟ್ಟುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಮಹಾಶಯ ಬರೋಬ್ಬರಿ 7 ಮಕ್ಕಳನ್ನುಕರೆದುಕೊಂಡು (Mumbai) ಜಾಲಿ ರೈಡ್ ಮಾಡುತ್ತಿದ್ದ ಪ್ರಕರಣದ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ.
ಈ ಘಟನೆ ಮುಂಬೈ ನಲ್ಲಿ ನಡೆದಿದ್ದು,ವ್ಯಕ್ತಿಯನ್ನು ಮುನವ್ವರ್ ಶಾ (Munavvar Shah) ಎಂದು ಗುರುತಿಸಲಾಗಿದೆ. ಈತ ತನ್ನ ಸ್ಕೂಟರ್‍ನಲ್ಲಿ 7 ಮಂದಿಯನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದ. ಸ್ಕೂಟರ್ ನಲ್ಲಿ ಕುಳಿತಿದ್ದ ನಾಲ್ವರು ಮುನವ್ವರ್ ಎಂಬ ವ್ಯಕ್ತಿಯ ಮಕ್ಕಳಾಗಿದ್ದು, ಉಳಿದವರು ನೆರೆಹೊರೆಯವರ ಮಕ್ಕಳು ಎಂದು ತಿಳಿದು ಬಂದಿದೆ.
ಈ ಪ್ರಕರಣ ಬೆಳಕಿಗೆ ಬಂದದ್ದು ಹೇಗೆ ಗೊತ್ತಾ?
ಮುನವ್ವರ್ ತನ್ನ ಸ್ಕೂಟಿನಲ್ಲಿ ಬರೋಬ್ಬರಿ 7 ಮಕ್ಕಳನ್ನು ಕೂರಿಸಿಕೊಂಡು ತೆಂಗಿನಕಾಯಿ ಮಾರಾಟ ಮಾಡುತ್ತಿದ್ದರು. ಈ ಸಂದರ್ಭ ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿ ಈ ವಿಡಿಯೋ ನೋಡಿ ನೆಟ್ಟಿಗರು ಈ ಹುಚ್ಚಾಟಕ್ಕೆ ಕಿಡಿ ಕಾರಿದ್ದಾರೆ. ಆ ಬಳಿಕ ಸ್ಥಳೀಯರು ಈ ವೀಡಿಯೋವನ್ನು ಮುಂಬೈ ಪೊಲೀಸರಿಗೆ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇದರಿಂದಾಗಿ ತಕ್ಷಣವೇ ಎಚ್ಚೆತ್ತ ಮುಂಬೈ ಖಾಕಿ ಪಡೆ ಸ್ಕೂಟರ್ ಸವಾರನನ್ನು ಹುಡುಕಿ ಬಂಧಿಸಿದ್ದಾರೆ.ಇದೇ ರೀತಿಯ ಹುಚ್ಚು ಸಾಹಸ ಮಾಡಿ ಅದೆಷ್ಟೋ ಜೀವಗಳು ಬಲಿಯಾಗಿದ್ದರು ಕೂಡ ಜನರ ಹುಚ್ಚಾಟ ಮಾತ್ರ ನಿಲ್ಲದಿರುವುದೆ ವಿಪರ್ಯಾಸ.
