Home » Day Today Science: ರಸ್ತೆಯಲ್ಲಿ ನಡೆಯುವಾಗ ರಸ್ತೆಯ ಬಲಬದಿಯಲ್ಲಿ ಚಲಿಸಬೇಕಾ ಅಥವಾ ಎಡ ಬದಿಯಲ್ಲಾ, ಏನನ್ನುತ್ತೆ ಸೈನ್ಸ್ ?

Day Today Science: ರಸ್ತೆಯಲ್ಲಿ ನಡೆಯುವಾಗ ರಸ್ತೆಯ ಬಲಬದಿಯಲ್ಲಿ ಚಲಿಸಬೇಕಾ ಅಥವಾ ಎಡ ಬದಿಯಲ್ಲಾ, ಏನನ್ನುತ್ತೆ ಸೈನ್ಸ್ ?

1,249 comments

Day Today Science: ಇತ್ತೀಚೆಗೆ ರಸ್ತೆ ಅಪಘಾತಗಳು ತೀರಾ ಹೆಚ್ಚಾಗಿದೆ. ಕೇವಲ ವಾಹನಗಳು ಡಿಕ್ಕಿಯಾಗೋದು ಮಾತ್ರವಲ್ಲದೆ ರಸ್ತೆ ಬದಿ ನಡೆದುಕೊಂಡು ಹೋಗುವ ಜನರಿಗೆ ವಾಹನ ಡಿಕ್ಕಿ ಹೊಡೆದಿರುವ ಪ್ರಕರಣಗಳು ಸಾಕಷ್ಟಿವೆ. ನಸೀಬು ಕೆಟ್ಟು ಅಪಘಾತ ಆಗಿ ಆಸ್ತಿ ಜೀವ ಹಾನಿಯಾಗುವುದು ಒಂದು ಕಡೆಯಾದರೆ, ನಮ್ಮ ಕಡಿಮೆ ತಿಳುವಳಿಕೆಯಿಂದ ಕನಿಷ್ಠ ಸುರಕ್ಷತಾ ಜ್ಞಾನದಿಂದ ಅವಘಡಗಳು ಸಂಭವಿಸಿ ಬಿಡೋದು ಇನ್ನೊಂದು ತೆರನಾದ ಸಂಭವನೀಯತೆ. ಹಾಗಾಗಿ ವಾಹನ ಸವಾರರು ಮಾತ್ರವಲ್ಲದೆ ಪಾದಚಾರಿಗಳು ಕೂಡ ರಸ್ತೆಯಲ್ಲಿ ಚಲಿಸುವಾಗ ಗರಿಷ್ಠ ಜಾಗರೂಕತೆಯಿಂದ ಇರಬೇಕು.

ರಸ್ತೆಯಲ್ಲಿ ಸಂಚರಿಸುವುವಾಗ ಎಲ್ಲಾ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸುವುದರಿಂದಲೂ ಆಗುವ ಅಪಘಾತಗಳನ್ನು ತಪ್ಪಿಸಬಹುದು. ನಿಮಗೆ ಗೊತ್ತಾ? ರಸ್ತೆಯ ಬಲ ಭಾಗದಲ್ಲಿ ನಡ್ಕೊಂಡು ಹೋಗಬೇಕಾ ಅಥವಾ ಎಡಭಾಗದಲ್ಲಾ ? ಈ ಸುರಕ್ಷತಾ ಪಾಠ (Day Today Science) ನೀವು ತಿಳಿದುಕೊಳ್ಳಲೇಬೇಕು.

ಭಾರತದಲ್ಲಿ ಎಲ್ಲಾ ವಾಹನಗಳು ಎಡಭಾಗದಲ್ಲಿ ಚಲಿಸುತ್ತವೆ. ಆದರೆ ಹೆಚ್ಚಿನ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಾಹನಗಳು ಬಲಭಾಗದಲ್ಲಿ ಚಲಿಸುವುದುಂಟು. ಅದಿರಲಿ, ನಾವು ನಮ್ಮ ದೇಶದಲ್ಲಿ ವಾಹನಗಳು ಎಡಭಾಗದಲ್ಲಿ ಚಲಿಸುತ್ತಾ ಇರುವ ಸಂದರ್ಭದಲ್ಲಿ ನಾವು, ಅಂದರೆ ಪಾದಚಾರಿಗಳು ಯಾವ ಭಾಗದಲ್ಲಿ ನಡೆದುಕೊಂಡು ಹೋಗಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

ವಾಹನ ಎಡ ಭಾಗದಲ್ಲಿ ಚಲಿಸುತ್ತಿದ್ದರೆ ನಾವು ಬಲಭಾಗದಲ್ಲಿ ಸಂಚರಿಸಬೇಕು. ಒಂದು ವೇಳೆ ನಾವು ಕೂಡ ಎಡಭಾಗದಲ್ಲೇ ನಡೆದುಕೊಂಡು ಹೋದರೆ, ಆಗ ನಮ್ಮ ಹಿಂದಿನಿಂದ ಬರುವ ವಾಹನ ಎಡಭಾಗದಲ್ಲಿ ಬರುವ ಕಾರಣದಿಂದ ಅದು ನಾವು ನಡೆದು ಹೋಗುವ ಸೈಡ್ ನಲ್ಲೆ ಇರುತ್ತದೆ. ಎಷ್ಟರ ಮಟ್ಟಿಗೆ ನಮಗೂ ವಾಹನಕ್ಕೂ ಅಂತರ ಇಟ್ಟುಕೊಂಡು ಆ ಡ್ರೈವರ್ ವಾಹನವನ್ನು ಚಲಾಯಿಸುತ್ತಾನೆ ಎಂಬುದನ್ನು ನಮಗೆ ತಿಳಿದುಕೊಳ್ಳಲು ಆಗುವುದಿಲ್ಲ ಯಾಕೆಂದರೆ ಹಿಂಬದಿಂದ ಆಗುವ ಘಟನೆಗಳನ್ನು ನಾವು ಕಣ್ಣಿಂದ ನೋಡಲಾರೆವು. ಹಾಗಾಗಿ ಇಲ್ಲಿ ಅಪಘಾತವಾಗುವ ಸಂಭವವೂ ಹೆಚ್ಚಾಗಿರುತ್ತದೆ. ಹಾಗಾಗಿ ವಾಹನ ಎಡ ಭಾಗದಲ್ಲಿ ಚಲಿಸುತ್ತಿದ್ದರೆ, ಅಂದರೆ ಭಾರತದಂತಹ ದೇಶದಲ್ಲಿ ನಾವು ಬಲಭಾಗದಲ್ಲಿ ಸಂಚರಿಸಬೇಕು. ಆಗ ಹಿಂಬದಿಯಿಂದ ಬರುವ ರಸ್ತೆಯ ಇನ್ನೊಂದು ಬದಿಯಲ್ಲಿ ಸಾಗುವ ಕಾರಣದಿಂದ ನಮಗೆ ಅದು ಒರೆಸಿಕೊಂಡು ಅಥವಾ ಗುದ್ಧಿಕೊಂಡು ಹೋಗುವ ಸಂಭವನೀಯತೆ ತುಂಬಾ ಕಡಿಮೆಯಾಗುತ್ತದೆ.

ಅದೇ ಸಂದರ್ಭದಲ್ಲಿ ಯಾವುದಾದರೂ ವಾಹನ ಮುಂದಿನಿಂದ ಬಂತು ಅಂದುಕೊಳ್ಳೋಣ. ಆಗ ಮುಂದಿನಿಂದ ಬರುವ ವಾಹನ ನಾವು ನಡೆದುಕೊಂಡು ಹೋಗುವ ಸೈಡಿನಲ್ಲಿ ಬರುತ್ತದೆ. ಆದರೆ ಇಲ್ಲಿ ಅಪಾಯ ಕಡಿಮೆ. ಯಾಕೆಂದರೆ ಎದುರಿಗೆ ಬರುವ ವಾಹನ ನಮಗೆ ಕಾಣಿಸುತ್ತದೆಯಾದ್ದರಿಂದ ಅಪಾಯ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಕಂಟ್ರೋಲ್ ನಲ್ಲಿ ಇರುತ್ತದೆ. ಮುಂದಿನಿಂದ ಬರುವ ವಾಹನದ ಚಲನೆಗೆ ಅನುಸಾರವಾಗಿ ಒಂದು ವೇಳೆ ತುಂಬಾ ಸೈಡಿಗೆ ಬಂದರೆ ನಾವು ಪಕ್ಕಕ್ಕೆ ಜರುಗಿ ಬಿಡಬಹುದು. ಹಾಗಾಗಿ ನಮ್ಮ ದೇಶದಲ್ಲಿ ಜನರು ರಸ್ತೆಯಲ್ಲಿ ನಡೆಯುವಾಗ ಬಲಭಾಗದಲ್ಲಿ ನಡೆಯಬೇಕು. ಅಂದ್ರೆ ನಮ್ಮಲ್ಲಿ ವಾಹನಗಳು ಎಡಭಾಗದಲ್ಲಿ ಚಲಿಸುತ್ತವಾದ್ದರಿಂದ ನಾವು ಬಲಭಾಗದಲ್ಲಿ ಸಂಚರಿಸಬೇಕು.

ಉಳಿದಂತೆ ಭಾರತದಂತಹ ಸುರಕ್ಷತೆಗೆ ಅತ್ಯಂತ ಕಡಿಮೆ ಪ್ರಾಮುಖ್ಯತೆ ಕೊಡುವ ರಾಷ್ಟ್ರದ ರಸ್ತೆಯಲ್ಲಿ ನಡೆಯುವಾಗ ಎಷ್ಟೇ ಜಾಗರೂಕರಾಗಿ ಇದ್ದರೂ ಕಮ್ಮಿ. ಪಾದಚಾರಿಗಳಿಗಾಗಿ ನಿರ್ಮಿಸಿರುವ ಸ್ಥಳದಲ್ಲೇ ಸಂಚರಿಸಿ. ನೀವು ರಸ್ತೆ ದಾಟುವ ಮೊದಲು ಎರಡೂ ಕಡೆ ನೋಡಿ ನಂತರ ಸುರಕ್ಷಿತವಾಗಿ ರಸ್ತೆ ದಾಟಿ. ಅಲ್ಲದೆ, ಮೊಬೈಲ್ ಬಳಸಿಕೊಂಡು ರಸ್ತೆ ಬದಿಯಲ್ಲಿ ನಡೆಯುವುದು, ರಸ್ತೆ ದಾಟುವುದು ಒಳ್ಳೆಯದಲ್ಲ. ಮೊಬೈಲ್ ಫೋನ್ ಅನ್ನು ಜೆಬಿ ನಲ್ಲಿ ಇಟ್ಟು ರಸ್ತೆ ಎಲ್ಲಿ ನಡೆಯುವಾಗ ಬಳಸದೆ ಇರುವುದು ಜೀವನವನ್ನು ಪ್ರೀತಿಸುವವನ ಜಾಣತನ. ವಾಹನಗಳು ರಸ್ತೆಯಲ್ಲಿ ಚಲಿಸುತ್ತಿದ್ದರೂ ರಸ್ತೆ ಬದಿಯಲ್ಲಿ ಸಂಚರಿಸುವ ನಾವು ಸದಾ ಜಾಗರೂಕತೆಯಿಂದ ಇರಬೇಕು ಎನ್ನುತ್ತಾ ನಮಗಾಗಿ ಮತ್ತು ನಮ್ಮ ಕುಟುಂಬಕ್ಕಾಗಿ ಎಲ್ಲಾ ರಸ್ತೆ ಸುರಕ್ಷತಾ ವಿಧಾನಗಳನ್ನು ಪಾಲಿಸುವ ಪ್ರತಿಜ್ಞೆಗೈಯೋಣ.

You may also like

Leave a Comment