Uttar Pradesh: ಪ್ರೀತಿ ಕುರುಡು ಅಂತ ಬಲ್ಲವರು ಹೇಳಿದ್ದಾರೆ. ಈಗ ಮೂಗಿ ಅಂತ ಕೂಡಾ ಹೇಳಬಹುದೇನೋ ?! ಇಲ್ಲಿ ಪ್ರೀತಿ ಕುರುಡು ಮತ್ತು ಮೂಕ ಕೂಡಾ ಆಗಿದೆ. ಅತಿಯಾದ ಕುರುಡು ಪ್ರೀತಿಗಾಗಿ, ಇಲ್ಲೊಬ್ಬ ವ್ಯಕ್ತಿ ತನ್ನ ಹೊಸ ಗೆಳತಿಗಾಗಿ ಪತ್ನಿಯ ಮೂಗು ಕತ್ತರಿಸಿ ಜೇಬಿಗೆ ಹಾಕಿಕೊಂಡು ಸ್ಥಳದಿಂದ ಎಸ್ಕೆಪ್ ಆಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ (Uttar Pradesh) ಲಖಿನಂಪುರ್ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತೀವ್ರ ರಕ್ತಸ್ರಾವದಿಂದ ಇದ್ದರೂ ಪತ್ನಿಯು ಮೂಗು ಅದುಮಿಕೊಂಡು ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ನೀಡಿದ್ದಾಳೆ.
ವಿಕ್ರಮ್ ಎಂಬ ವ್ಯಕ್ತಿ ತನ್ನ ಪತ್ನಿ ಸೀಮಾದೇವಿ ಮತ್ತು ಇಬ್ಬರು ಮಕ್ಕಳೊಂದಿಗೆ ಉತ್ತರ ಪ್ರದೇಶದ ಲಖಿನಂಪುರ್ ಖೇರಿ ಜಿಲ್ಲೆಯ ಮಿಥೌಲಿ ಪ್ರದೇಶದ ಬನ್ಸ್ಟಾಲಿ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಈ ಜೋಡಿ ಮದುವೆಯಾಗಿ 12 ವರ್ಷಗಳಾಗಿದ್ದು, ಇತ್ತೀಚಿಗೆ ವಿಕ್ರಂಗೆ ಮಹಿಳೆಯೊಬ್ಬಳ ಪರಿಚಯವಾಗಿದೆ. ತದನಂತರ ವಿಕ್ರಮ್ ಗೆ ಆಕೆ ಜತೆ ಸಂಬಂಧ ಬೆಳೆಸಿದ್ದಾನೆ. ಈ ಸಂಬಂಧ ಸೀಮಾದೇವಿಗೆ ತಿಳಿದಿದ್ದು, ಈ ವಿಷಯದ ಮೇಲೆ ಇಬ್ಬರ ನಡುವೆ ಜಗಳ ನಡೆದಿದೆ.
ಕಳೆದ ಶನಿವಾರ ವಿಕ್ರಮ್ ತನ್ನ ಪತ್ನಿ ಸೀಮಾದೇವಿಯೊಂದಿಗೆ ಮತ್ತೆ ಜಗಳವಾಗಿತ್ತು. ಅವರ ನಾಲ್ಕು ವರ್ಷದ ಪುಟ್ಟ ಮಗಳು ಮೊಬೈಲ್ ಫೋನ್ ನೋಡುತ್ತಾ ಆಡುತ್ತಾ ಕುಳಿತಿದ್ದಾಳೆ. ಆಗ ಅಪ್ಪ ಮೊಬೈಲ್ ಕೊಡಲು ವಿಕ್ರಂ ಕೇಳುತ್ತಾನೆ. ಆದರೆ, ಮಗು ನೀಡಿಲ್ಲ. ಇದರಿಂದ ವಿಕ್ರಮ್ ಕೋಪಗೊಂಡು ಮಗುವಿಗೆ ಎರಡೇಟು ಬಿಗಿದಿದ್ದಾನೆ. ಅದನ್ನು ನೋಡಿದ ಪತ್ನಿ ಸೀಮಾದೇವಿ ತಡೆಯಲು ಹೋಗಿದ್ದಾಳೆ, ಅಷ್ಟೇ. ಆಗ ಕೋಪಗೊಂಡ ವಿಕ್ರಂ ಸಿಟ್ಟಿಗೆದ್ದು ಅಲ್ಲೇ ಇದ್ದ ಚಾಕು ತೆಗೆದುಕೊಂಡು ಸೀಮಾದೇವಿಯ ಮೂಗು ಕೊಯ್ದಿದ್ದಾನೆ. ಆಗ ತೀವ್ರನೋವಿನಿಂದ ಸೀಮಾದೇವಿ ಕಿರುಚಿಕೊಂಡಿದ್ದು, ಸ್ಥಳೀಯರು ಏನಾಯಿತೆಂದು ಓಡಿ ಬಂದಿದ್ದಾರೆ. ಅಷ್ಟರಲ್ಲಿ ಪತಿ ತುಂಡರಿಸಿದ ಮೂಗನ್ನು ಜೇಬಲ್ಲಿ ಹಾಕಿಕೊಂಡು ಪಲಾಯನ ಮಾಡಿದ್ದಾನೆ. ಸೀಮಾದೇವಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಚಿಕಿತ್ಸೆ ಬಳಿಕ ಸೀಮಾದೇವಿ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ವಿಕ್ರಮ್ ಪ್ರತಿದಿನ ಕುಡಿದು ಬರುತ್ತಿದ್ದು, ಕುಡಿದ ಅಮಲಿನಲ್ಲಿ ತನಗೆ ಥಳಿಸುತ್ತಿದ್ದ. ಈಗ ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ನೀಡುತ್ತಿದ್ದ. ಮಕ್ಕಳನ್ನು ಕಡೆಗಣಿಸಿದ್ದು ಅಲ್ಲದೆ ಆತ ಮಕ್ಕಳನ್ನು ಪದೇ ಪದೇ ಹೊಡೆಯುತ್ತಿದ್ದ ಎಂದು ಆತ ದೂರು ನೀಡಿದ್ದಾರೆ. ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂಗಿನ ಸಮೇತ ತಲೆಮರೆಸಿಕೊಂಡಿರುವ ವಿಕ್ರಮನಿಗಾಗಿ ಹುಡುಕಾಟ ನಡೆಸಿದ್ದಾರೆ.
