ಮಂಗಳೂರು: ಈ ವರ್ಷ ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ನಡೆಸಲು ಶಿಕ್ಷಣ ಇಲಾಖೆಯು ಜೂ. 19ರಂದು ಸುತ್ತೋಲೆ ಹೊರಡಿಸಿ ಈ ವರ್ಷದ ಪ್ರತಿಭಾ ಕಾರಂಜಿಯ ದಿನಾಂಕವನ್ನು ಘೋಷಣೆ ಮಾಡಿದೆ. ಆದರೆ ಸುತ್ತೋಲೆಯಲ್ಲಿ ಜಾನಪದ ನೃತ್ಯ ವಿಭಾಗದಲ್ಲಿ ಭೂತದ ಕೋಲಕ್ಕೆ ಅವಕಾಶ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಜುಲೈ ತಿಂಗಳಲ್ಲಿ ಶಾಲಾ ಮಟ್ಟ, ಆಗಸ್ಟ್ ತಿಂಗಳಲ್ಲಿ ಕ್ಲಸ್ಟರ್ ಮಟ್ಟ, ಮುಂದೆ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿಯೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಇದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಒಂದು ಉತ್ತಮ ವೇದಿಕೆಯಾಗಿದೆ.
ಜಾನಪದ ನೃತ್ಯವು ಸಮೂಹ ವಿಭಾಗವಾಗಿದ್ದು ಅದರಲ್ಲಿ ಬುಡಕಟ್ಟು, ಜಾನಪದ, ಪಾರಂಪರಿಕ ಕಲೆಗಳನ್ನು ಪ್ರದರ್ಶಿಸಬೇಕು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ. ಅಷ್ಟೇ ಹೇಳಿ ಮುಗಿಸಿದ್ದರೆ ವಿವಾದ ಆಗುತ್ತಿರಲಿಲ್ಲ. ಆದರೆ ಅದೇ ಸುತ್ತೋಲೆಯಲ್ಲಿ ಗೊರವರ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ ಇತ್ಯಾದಿ ಉದಾಹರಣೆಗಳನ್ನು ನೀಡಲಾಗಿದೆ. ಕೊನೆಯಲ್ಲಿ ಭೂತದ ಕೋಲ (ಭೂತದ ಕೋಲು ಎಂದು ಆದೇಶದಲ್ಲಿದೆ ?) ಕ್ಕೆ ಈ ಬಾರಿ ಅನುಮತಿ ನೀಡಲಾಗಿದೆ ಎಂಬ ಉಲ್ಲೇಖ ಇದೆ. ಇದು ತುಳುನಾಡಿನ ಜನರ ನಂಬಿಕೆಗಳಿಗೆ ನೋವು ಉಂಟುಮಾಡುವ ಸಂಗತಿಯಾಗಿದೆ.
ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜಾ:
ಕರಾವಳಿಯಲ್ಲಿ ಮಳೆ ಮುಂದುವರೆದಿದೆ. ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಿರಲಿದೆ. ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.
ಅಷ್ಟೇ ಅಲ್ಲದೆ, ನಾಳೆ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಗನವಾಡಿ, ಎಲ್ಲಾ ಶಾಲೆಗಳಿಂದ ಹಿಡಿದು ಪದವಿ ಪೂರ್ವ ಕಾಲೇಜುಗಳ ತನಕ ರಜೆ ಘೋಷಣೆ ಮಾಡಿ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಆದೇಶ ಹೊರಡಿಸಿದ್ದಾರೆ.

