Uttar Pradesh : ಮಧ್ಯಪ್ರದೇಶದಲ್ಲಿ (Madhya pradesh) ಬಿಜೆಪಿ (BJP) ಕಾರ್ಯಕರ್ತನೊಬ್ಬ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಿಂಸಿಸಿದ್ದು, ದೇಶಾದ್ಯಂತ ಭಾರೀ ಸುದ್ಧಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೇ ಮಧ್ಯಪ್ರದೇಶದ ಶಿವಪುರಿಯಲ್ಲಿ (Shivapuri) ಮುಸ್ಲಿಂ ಯುವತಿಯೊಂದಿಗೆ ಮಾತನಾಡಿದ್ದಕ್ಕಾಗಿ, ದಲಿತ ಯುವಕರಿಗೆ ಬಲವಂತವಾಗಿ ಮಲ ತಿನ್ನಿಸಿದ ಹೀನ ಕೃತ್ಯ ಎಸಗಿದ್ದಾರೆ. ಈ ಎಲ್ಲಾ ಘಟನೆ ಬಳಿಕ ಇದೀಗ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಆತನಿಂದ ಕಾಲನ್ನು, ಚಪ್ಪಲಿಯನ್ನು ನೆಕ್ಕಿಸಿದ ಹೀನ ಕೃತ್ಯ ಇದೀಗ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಘಟನೆ ಸಂಬಂಧಿಸಿ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿದೆ. ಎಲ್ಲೆಡೆ ಇನ್ನಷ್ಟು ಮತ್ತಷ್ಟು ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತನನ್ನು ರಾಜೇಂದ್ರ ಹಾಗೂ ಆರೋಪಿಯನ್ನು ತೇಜ್ಬಲಿ ಸಿಂಗ್ ಎಂದು ಗುರುತಿಸಲಾಗಿದೆ. ತೇಜ್ಬಲಿ ಇಂಧನ ಇಲಾಖೆಯ ಲೈನ್ಮ್ಯಾನ್ ಎಂದು ತಿಳಿದುಬಂದಿದೆ. ರಾಜೇಂದ್ರನ ಚಿಕ್ಕಪ್ಪನ ಮನೆಯಲ್ಲಿ ವಿದ್ಯುತ್ ಸಮಸ್ಯೆ ಇತ್ತು. ಹಾಗಾಗಿ ಲೈನ್ಮ್ಯಾನ್ ತೇಜ್ಬಲಿ ಸ್ಥಳಕ್ಕಾಗಮಿಸಿ, ವಿದ್ಯುತ್ ಸಮಸ್ಯೆ ಸರಿಪಡಿಸುತ್ತಿದ್ದ. ಆದರೆ,
ಯಾವುದೋ ವಿಚಾರವಾಗಿ ಆಕ್ರೋಶಗೊಂಡ ತೇಜ್ಬಲಿ ಸಿಂಗ್, ರಾಜೇಂದ್ರನ ಮೇಲೆ ಹಲ್ಲೆ ನಡೆಸಿದ್ದಾನೆ. ಆತನಿಗೆ ಥಳಿಸಿ, ಚಪ್ಪಲಿ ನೆಕ್ಕುವಂತೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಲಿತ ಯುವಕನಿಗೆ ಚಿತ್ರಹಿಂಸೆ ನೀಡಿದ್ದಾನೆ. ಲೈನ್ಮ್ಯಾನ್, ಸಂತ್ರಸ್ತ ರಾಜೇಂದ್ರನನ್ನು ನೆಲಕ್ಕೆ ಬೀಳಿಸಿ ಮನಬಂದಂತೆ ಥಳಿಸಿದ್ದಾನೆ. ಅಲ್ಲದೆ, ಪದೇಪದೆ ಕಪಾಳಮೋಕ್ಷ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಲೈನ್ಮ್ಯಾನ್ ಮಂಚದ ಮೇಲೆ ಕುಳಿತು ಸಂತ್ರಸ್ತನಿಂದ ಚಪ್ಪಲಿ ಸಹಿತ ಕಾಲು ನೆಕ್ಕಿಸಿದ್ದಾನೆ. ಬಸ್ಕಿ ಹೊಡೆಸಿ, ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು 1989ರ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಕಾಯ್ದೆ (ದೌರ್ಜನ್ಯ ತಡೆ ಕಾಯ್ದೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Election: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ನಿನ್ನೆ 16 ಮಂದಿ ಸಾವು ; ಹಿಂಸೆಯ ಜತೆ ಮುಗಿದ ಓಟಿಂಗ್ !
