Marriage: ಉತ್ತರ ಪ್ರದೇಶದ ಆಗ್ರಾದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನಗೆ ವರದಕ್ಷಿಣೆಯಾಗಿ ಕಾರು ನೀಡದೇ ಇರುವುದಕ್ಕೆ ಕೋಪಗೊಂಡು, ಮದುವೆಯಾಗಿ (Marriage) ಕೇವಲ 2 ಗಂಟೆಯೊಳಗೇ ವಧುವಿಗೆ ತ್ರಿವಳಿ ತಲಾಖ್ ಘೋಷಿಸಿದ್ದಾನೆ.
ಮುಖ್ಯವಾಗಿ ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಯಾಗಿದೆ. ಆದರೆ ಮುಸ್ಲಿಂ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಮಾತ್ರ ನಿಲ್ಲುತ್ತಿಲ್ಲ. ಇದಕ್ಕೆ ಉದಾಹರಣೆಯೆಂಬಂತೆ ಮುಸ್ಲಿಂ ವರನೊಬ್ಬ ಮದುವೆಯಾದ ಎರಡೇ ಗಂಟೆಯೊಳಗೆ ತನ್ನ ಹೆಂಡತಿಗೆ ತಲಾಖ್ ನೀಡಿದ್ದಾನೆ!
ಡಾಲಿ ಎಂಬವಳನ್ನು ವಿವಾಹ ಆಗಿರುವ ಮೊಹಮ್ಮದ್ ಆಸೀಫ್ ಕಿರಿಕ್ ಮಾಡಿದ್ದು, ಕುಟುಂಬಸ್ಥರ ಬೆಂಬಲದೊಂದಿಗೆ ವರದಕ್ಷಿಣೆಯಾಗಿ ಕಾರು ಕೊಡಿಸಬೇಕು ಎಂದು ವರ ಬೇಡಿಕೆ ಇಟ್ಟಿದ್ದಾನೆ. ಇಲ್ಲದಿದ್ದರೆ ಈಗಲೇ 5 ಲಕ್ಷ ರೂಪಾಯಿ ಕೊಡುವಂತೆ ಪಟ್ಟು ಹಿಡಿದಿದ್ದಾನಂತೆ.
ಈ ವೇಳೆ ಆರ್ಥಿಕವಾಗಿ ತೊಂದರೆಗೊಳಗಾಗಿದ್ದ ವಧುವಿನ ಕುಟುಂಬಸ್ಥರು ಕಾರು ಕೊಡಿಸೋದಕ್ಕೆ ಸ್ವಲ್ಪ ಸಮಯ ಕೇಳಿದ್ದಾರೆ. ಇದರಿಂದ ವರನ ಕುಟುಂಬಸ್ಥರು ಸಿಟ್ಟಾಗಿದ್ದಾರೆ. ಸಾಲದ್ದಕ್ಕೆ ವರ ಮದುವೆಯಾದ 2 ಗಂಟೆಯೊಳಗೆ ತಲಾಖ್ ಹೇಳಿ, ಅಲ್ಲಿಂದ ಹೊರಟು ಹೋಗಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ವಧುವಿನ ಸಹೋದರ ಕಮ್ರಾನ್ ವಾಸಿ ನನ್ನ ಇಬ್ಬರು ಸಹೋದರಿಯರಾದ ಡಾಲಿ ಹಾಗೂ ಗೌರಿಗೆ ಒಂದೇ ದಿನ ಮದುವೆಯನ್ನು ನಿಶ್ಚಯ ಮಾಡಲಾಗಿತ್ತು. ಮದುವೆಯಾದ ಬಳಿಕ ಗೌರಿ ತನ್ನ ಗಂಡನ ಮನೆಯವರ ಜೊತೆ ಹೊರಟು ಹೋಗಿದ್ದು, ಡಾಲಿಯ ಪತಿ ಮೊಹಮ್ಮದ್ ಆಸಿಫ್ ತನಗೆ ವರದಕ್ಷಿಣೆಯಲ್ಲಿ ಕಾರು ಕೊಡಲಿಲ್ಲ ಎಂದು ಕಿರಿಕ್ ತೆಗೆದಿದ್ದಾನೆ.
ಈ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಮಯ ಕೇಳಿದ್ದಕ್ಕಾಗಿ ಕುಪಿತಗೊಂಡ ಆತನ ಕುಟುಂಬಸ್ಥರು ಸ್ಥಳದಲ್ಲಿಯೇ ವರನ ಕಡೆಯಿಂದ ಮೂರು ಬಾರಿ ತಲಾಖ್ ಹೇಳಿಸಿ ಹೊರಟು ಹೋಗಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ವರ ಮೊಹಮ್ಮದ್ ಅಸಿಫ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ ಎಂದು ವಧುವಿನ ಸಹೋದರ ಕಮ್ರಾನ್ ವಾಸಿ ತಿಳಿಸಿದ್ದಾರೆ.
ಈ ಸಂಬಂಧ ವಧುವಿನ ಅಣ್ಣ ಕಮ್ರಾನ್ ವಾಸಿ ನೀಡಿದ ದೂರಿನ ಮೇರೆಗೆ ಪೊಲೀಸರು ವರ ಮೊಹಮ್ಮದ್ ಆಸಿಫ್ ಸೇರಿದಂತೆ ಆರು ಮಂದಿ ಪ್ರಕರಣ ದಾಖಲಿಸಿಕೊಂಡು FIR ಸಿದ್ದಪಡಿಸಲಾಗಿದೆ.
