ಧರ್ಮಸ್ಥಳದ ಸೌಜನ್ಯ ಗೌಡ ಅತ್ಯಾಚಾರ ಮತ್ತು ಹತ್ಯಾ ಪ್ರಕರಣದ ಸಂಬಂಧ ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟದ ಭಾಗವಾಗಿ ಇವತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಉಡುಪಿಯ ಅಂಬೇಡ್ಕರ್ ಯುವ ಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಗೆ ಅಂಬೇಡ್ಕರ್ ಯುವ ಸೇನೆ ಸದಸ್ಯರಲ್ಲದೇ ಇತರ ಸಮಾನ ಮನಸ್ಕ ಜನರೂ ಸೇರಿ ಭಾವಹಿಸಿದ್ದು ವಿಶೇಷವಾಗಿತ್ತು.
ಇಂದು ಉಡುಪಿಯಲ್ಲಿ ನಡೆದ ಈ ಹೋರಾಟದ ಸಭೆಯಲ್ಲಿ ಉಡುಪಿ ಜಿಲ್ಲೆಯ ಅಂಬೇಡ್ಕರ್ ಯುವ ಸೇನೆ ಪದಾಧಿಕಾರಿಗಳ ಮತ್ತು ಹೋರಾಟಗಾರರ ಜತೆ ಒಡನಾಡಿ ಸೇವಾ ಸಂಸ್ಥೆಯ ಪ್ರತಿನಿಧಿ ಕೂಡಾ ಇದ್ದರು. ‘ಜಾತಿ ಮತ ಬಿಡಿ, ಸೌಜನ್ಯಾಗೆ ನ್ಯಾಯ ಕೊಡಿ ‘ ಎನ್ನುವ ಘೋಷ ವಾಕ್ಯದ ಜತೆ ಇವತ್ತಿನ ಪ್ರತಿಭಟನಾ ಸಭೆ ಆರಂಭಗೊಂಡಿತ್ತು. ಮಳೆಯ ನಡುವೆಯೂ ಅರೆಬರೆ ನೆನೆಯುತ್ತಾ ಪ್ರತಿಭಟನೆ ನಡೆಸಿದ್ದು ಜನರ ಗಮನ ಸೆಳೆಯಿತು.


ಪ್ರತಿಭಟನಾ ಸಭೆಯಲ್ಲಿ ಒಡನಾಡಿ ಸೇವಾ ಸಂಸ್ಥೆಯ ಪ್ರತಿನಿಧಿ ಶ್ರೀನಿವಾಸ್, ಬೆಳ್ತಂಗಡಿಯ ಶೇಖರ್ ಲೈಲಾ ಮುಂತಾದವರು (ವಿವರ ಕೊನೆಯಲ್ಲಿ) ಮಾತನಾಡಿದರು. ಗಣ್ಯರ ಮಾತಿನ ಸಂದರ್ಭದಲ್ಲಿ ಈ ಕೆಳಗಿನ ಪ್ರಮುಖ ಪ್ರಖರ ಮಾತುಗಳು ಕೇಳಿಬಂದವು.
1) ಧರ್ಮಸ್ಥಳ ಎನ್ನುವುದು ಒಂದು ಗ್ರಾಮ. ಈ ಗ್ರಾಮ 462 ಅಸಹಜ ಸಾವುಗಳು ನಡೆದಿವೆ. ಅದು ನಿಜವಾಗಿ ಕೂಡಾ ಸ್ಥಳೀಯ ಸಮಸ್ಯೆ ಅಲ್ಲ. ಇದು ರಾಜ್ಯದ ಸಮಸ್ಯೆ ಕೂಡಾ ಅಲ್ಲ. ಇದು ರಾಷ್ಟ್ರೀಯ ಪ್ರಕರಣ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದ ಪ್ರಕರಣ. ಸಾಮಾನ್ಯವಾಗಿ 25 ಜನರಿಗಿಂತ ಹೆಚ್ಚು ಜನರು ನಡೆದರೆ ಅಂತಹಾ ಹತ್ಯೆಗೆ ನರಮೇಧ ಎನ್ನಲಾಗುತ್ತದೆ. ಇದು ನಿಜಕ್ಕೂ ಅಂತಾರಾಷ್ಟ್ರೀಯ ಸಮಸ್ಯೆ. ಇಡೀ ದೇಶದ ಗಮನ ಇತ್ತ ಬರಬೇಕು.
2) ಇವತ್ತು ನಾವಿಲ್ಲ ಮಾಡುತ್ತಿರುವುದು ಒಂದು ತಪಸ್ಸು. ತಪಸ್ಸು ಅಂದರೆ, ನಿರಂತರವಾಗಿ ಒಂದೇ ವಿಷಯವನ್ನು ಹಿಡಿದು ಮಾಡುವ ಪ್ರಯತ್ನ. ಎಲ್ಲರೂ ಈ ಯಜ್ಞದಲ್ಲಿ ಭಾಗಿಗಳಾಗಿ ಹೋರಾಟ ನಡೆಸೋಣ
3) ಧರ್ಮಸ್ಥಳಕ್ಕೆ ಹೋಗುವ ಕೆಂಪು ಬಸ್ಸಿಗೆ ಕಪ್ಪು ಬಣ್ಣ ಬಳಿಯಲು ಹೇಳಿಕೆ
4) ಮಂಜುನಾಥ ದೇವರು, ದೇವಸ್ಥಾನದ ಬಗ್ಗೆ ಗೌರವ ನಂಬಿಕೆ ಇದೆ. ಆದ್ರೆ ಉಚಿತ ಬಸ್ಸಿನಲ್ಲಿ ಈಗ ಧರ್ಮಸ್ಥಳಕ್ಕೆ ಹೋಗುತ್ತಾರೆ ಜನ. ಆದ್ರೆ ನಾವೆಲ್ಲರೂ ಪ್ರತಿಜ್ಞೆ ಮಾಡೋಣ: ಸೌಜನ್ಯಾಗೆ ನ್ಯಾಯ ಸಿಕ್ಕ ನಂತರ ಮಾತ್ರ ನಾವು ಅಲ್ಲಿಗೆ ಹೋಗೋಣ ಎನ್ನುವ ಹೇಳಿಕೆ ನೀಡಿದ್ದಾರೆ ಹೋರಾಟಗಾರರು
5) ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಈ ಮೂರು ಪಕ್ಷಗಳು ಏನು ಕತ್ತೆ ಕಾದಿದ್ದಾವೆಯೆ ? ಯಾಕೆ ಯಾರಿಗೂ ನ್ಯಾಯ ಕೊಡಿಸಲು ಆಗಿಲ್ಲ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.
6) ಅವತ್ತು ಸೌಜನ್ಯ ತೀರಿಕೊಂಡ ನಂತರ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಆರ್ ಅಶೋಕ್ ಇತ್ಯಾದಿಯಾಗಿ ಎಲ್ಲರೂ ಧರ್ಮಸ್ಥಳಕ್ಕೆ ಬರುತ್ತಾರೆ ಆದರೆ ಕೇವಲ ಒಂದು ಕಿಲೋಮೀಟರ್ ಆಸುಪಾಸಿನಲ್ಲಿರುವ ಸೌಜನ್ಯ ಮನೆಗೆ ಬಂದು ಸಾಂತ್ವನ ಹೇಳಲು ಇವರಿಗೆ ಸಾಧ್ಯವಾಗಿಲ್ಲ, ಇದು ಯಾಕೆ ?
7) ಆಗಿನ ಗೃಹ ಮಂತ್ರಿ ಇದೇ ಸೌಜನ್ಯ ಗೌಡರ ಜಾತಿಯ ಒಕ್ಕಲಿಗ ನಾಯಕ ಕೂಡ ಆಗಿರುವ ಆರ್. ಅಶೋಕ್, ವೀರೇಂದ್ರ ಹೆಗ್ಗಡೆ ಹೇಳಿದ ಕಾರಣಕ್ಕೆ ಸಿಐಡಿ ತನಿಖೆಗೆ ಕೊಟ್ಟಿದ್ದೇವೆ ಅಂದಿದ್ದಾರೆ. ಸಿಬಿಐ ತನಿಖೆ ನಡೆಸಲು ಹೇಳಿದವನೆ ನಾನು ಎಂದು ಹೆಗ್ಗಡೆ ಹೇಳಿದ್ದರು. ಇವರು ಹೇಳಿದ ಕೂಡಲೇ ಸರ್ಕಾರ ಕೇಳುತ್ತೆ ಹಾಗಾದ್ರೆ. ಇಲ್ಲಿ ನಮ್ಮ ಪ್ರಶ್ನೆ ಕೂಡಾ ಇದೆ: ತನಿಖಾಧಿಕಾರಿಗಳನ್ನೂ ಕೂಡಾ ಇವರೇ ಹೇಳಿದಂತೆ ಅದಕ್ಕೆ ಹಾಕಿದ್ದಾರೆಯಾ ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
8) ಧರ್ಮಸ್ಥಳ ಒಂದು ಗ್ರಾಮ ಆಗಿರುವ ಕಾರಣ, ಧರ್ಮಸ್ಥಳದಲ್ಲಿ ಸೌಜನ್ಯ ಹತ್ಯೆ ಕೊಲೆ ಅಲ್ಲಿ ನಡೆದ ಕಾರಣದಿಂದ ಧರ್ಮಸ್ಥಳ ಎಂಬ ಪದ ಬಳಕೆ ಮಾಡಲೇ ಬೇಕಾಗುತ್ತದೆ. ದೆಹಲಿಯಲ್ಲಿ ‘ ನಿರ್ಭಯಾ ಪ್ರಕರಣ’ ಎಂದು ಹೇಳುತ್ತಿಲ್ಲವೆ ? ನಾವ್ಯಾರೂ ಇಲ್ಲಿನ ಕ್ಷೇತ್ರದ ಮತ್ತು ದೈವ ದೇವರ ಬಗ್ಗೆ ಮಾತಾಡುತ್ತಿಲ್ಲ ಎಂದು ಹೇಳಿಕೆ ಹೊರಬಂತು.
9) ಪ್ರತಿಭಟನೆ ನಮಗೆ ಸಂವಿಧಾನ ನೀಡಿದ ಹಕ್ಕು. ಧರ್ಮಸ್ಥಳ ಗ್ರಾಮದಲ್ಲಿ ಹತ್ತಿಯಾದ ಸೌಜನ್ಯಗಳಿಗೆ ನ್ಯಾಯ ಸಿಕ್ಕಿಲ್ಲ ಆದುದರಿಂದ ನಾವು ಪ್ರತಿಭಟಿಸುತ್ತಿದ್ದೇವೆ ಈ ಹಕ್ಕನ್ನು ಸಂವಿಧಾನ ಕೊಟ್ಟ ಹಕ್ಕನ್ನು ಯಾರು ಕಿತ್ತುಕೊಳ್ಳಲಾಗದು.
10) ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಮತ್ತು ಶೋಷಿತರ ಬೆಂಬಲಕ್ಕೆ ಯಾವತ್ತೂ ನಿಲ್ಲುವವರು. ಅವರು ಶುದ್ಧ ಹಸ್ತ ಅಧಿಕಾರಿಗಳ ಧೈರ್ಯಸ್ತ ಮತ್ತು ಯಾವ ಆಮಿಷಗಳಿಗೂ ಬಗ್ಗದಂತಹ ಅಧಿಕಾರಿಗಳ ಕೈಯಲ್ಲಿ ಈ ಪ್ರಕರಣದ ತನಿಖೆ ನಡೆಸಬೇಕು
ಕೊನೆಯದಾಗಿ ಜಾತಿ ಮತ ಬಿಟ್ಟು ಹೋರಾಟ ನಡೆಸುವಂತೆ ಕೋರಲಾಯಿತು. ಕೊನೆಯತನಕ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಪ್ರತಿಜ್ಞೆ ಮಾಡಲಾಯಿತು.
ಜನಪರ ಹೋರಾಟಗಾರ ಜಯನ್ ಮಲ್ಪೆ, ಬೆಳ್ತಂಗಡಿಯ ಪ್ರಗತಿಪರ ಹೋರಾಟಗಾರ ಶೇಖರ್ ಲಾಯಿಲ, ಹಿರಿಯ ಚಿಂತಕ ಪ್ರೊ. ಫಣಿರಾಜ್, ಹೋರಾಟಗಾರ ಶ್ರೀರಾಮ ದಿವಾಣ, ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮತ್ತು ತಾಲೂಕು ಸಂಚಾಲಕ ದಯಾನಂದ ಕಪ್ಪೆಟ್ಟು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಗಣೇಶ್ ನೆರ್ಗಿ, ರಮೇಶ್ ಪಾಲ್, ಕಿಟ್ಟ ಶ್ರೀಯಾನ್, ಬಿ.ಎನ್. ಸಂತೋಷ್, ಭಗವನ್ ದಾಸ್, ದಿನೇಶ್ ಜವನರಕಟ್ಟೆ ಮುಂತಾದವರು ಇವತ್ತಿನ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಪ್ರಮುಖರಾಗಿದ್ದರು.
