ಕರಾವಳಿಯಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜುಲೈ 25ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ರಜೆಯನ್ನು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ಕಾಲೇಜುಗಳ ವರೆಗೆ) ಕೂಡಾ ನಾಳೆ ರಜೆ ಸಾರಲಾಗಿದೆ. ಹಾಗೆನೇ ಕಡಬ ತಾಲೂಕಿನಲ್ಲೂ ನಾಳೆ (ಜು.25) ಅಂಗನವಾಡಿ, ಎಲ್ಲಾ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪರಿಸ್ಥಿತಿ ನೋಡಿಕೊಂಡು ರಜೆ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಹಾಗಾಗಿ ಇಂದು ಬೆಳಗ್ಗಿನಿಂದ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಕಾರಣದಿಂದ ಇಂದು ಮಧ್ಯಾಹ್ನದ ಬಳಿಕ ಪುತ್ತೂರು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದರು.
ಸುಳ್ಯ ತಾಲೂಕಿನಲ್ಲಿ ಇಂದು ಭಾರೀ ಮಳೆಯಾಗುತ್ತಿದ್ದು, ಕಳೆದ 21 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿದೆ ಎಂದು ವರದಿಯಾಗಿದೆ. ಹವಾಮಾನ ಪರಿಸ್ಥಿತಿಯು ಮುಂದುವರಿಯುವ ಸೂಚನೆಯಿದ್ದು, ಆರೆಂಜ್- ಅಲರ್ಟ್ ಘೋಷಣೆಯಾಗಿರುತ್ತದೆ.
ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಳ್ಯ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಕೆಳಗಿನಂತೆ ತುರ್ತು ಕ್ರಮಗಳನ್ನು ಕೈಗೊಂಡಿರುತ್ತದೆ.
1)ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ದಿನಾಂಕ:25-07-2023 ರಂದು ರಜೆಯನ್ನು ಘೋಷಿಸಲಾಗಿದೆ. .
2)ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸುವುದು.
3)ತಾಲೂಕು ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರತಕ್ಕದ್ದು ಹಾಗೂ ವಿಪತ್ತು ನಿರ್ಹಹಣೆಯನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ನಿರ್ವಹಿಸುವುದು.
4)ತಾಲೂಕು ಆಡಳಿತದಿಂದ ವಿವಿಧ ಪುದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ತಹಶೀಲ್ದಾರರು ಸುಳ್ಯ ಕಛೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು.
5)ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸುಳ್ಯ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳುವುದು.
6)ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸುವುದು.
ತುರ್ತು ಸೇವೆಗೆ 24*7 ಕಟ್ರೋಲ್ ರೂಂ 08257-231231
