Kanhaiya Kumar: ಪ್ರತಿ ಬಾರಿ ಬಿಜೆಪಿ ಕಾಂಗ್ರೆಸ್ ಮಧ್ಯೆ ಕಿತ್ತಾಟ ವಾಗ್ದಾಳಿ ಸಾಮಾನ್ಯವಾಗಿದೆ. ಇದೀಗ ದೇಶದ ಪ್ರಧಾನಿಗೆ ಅಖಿಲ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಎಐಸಿಸಿ ಉಸ್ತುವಾರಿ ಕನ್ನಯ್ಯ ಕುಮಾರ್ (Kanhaiya Kumar) ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಾವೇಶದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಕನ್ನಯ್ಯ ಕುಮಾರ್ ಅವರು, ದೇಶ ಇಂದು ಪಂಡಿತ್ ಜವಾಹರ್ ಲಾಲ್ ನೆಹರು ಅವರ ಕೈಯಲ್ಲಿಲ್ಲ, ಅಂಬೇಡ್ಕರ್, ಭಗತ್ ಸಿಂಗ್ ಅವರ ಕೈಯಲ್ಲೂ ಇಲ್ಲ. ಯಾರ ಕೈಯಲ್ಲಿದೆ ಗೊತ್ತಾ? ತನ್ನ ಪತ್ನಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲದವರ ಕೈಯಲ್ಲಿ ಇಂದು ದೇಶ ಇದೆ ಎಂದು ಕನ್ನಯ್ಯ ಕುಮಾರ್ ಪ್ರಧಾನಿ ಮೋದಿ (Narendra modi) ವಿರುದ್ಧ ಟೀಕೆಯ ಮಾತುಗಳನ್ನಾಡಿದರು.
ಸತ್ಯ ಹೇಳುವವರು ಯಾವತ್ತೂ ಹೆದರಬಾರದು. ಸುಳ್ಳು ಹೇಳುವವರಿಗೆ ಹೆದರಿಕೆ ಅನ್ನೋದು ಸಹಜ. ಈ ದೇಶ ಪ್ರತಿಯೊಬ್ಬರಿಗೂ ಸೇರಿದ್ದು, ಎಲ್ಲರಿಗಾಗಿ ನಾವು ಹೋರಾಟ ಮಾಡೋಣ. ಯುವ ಸಮೂಹದ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದರು. ಹಾಗೆಯೇ ಯುವ ಕಾಂಗ್ರೆಸ್ ಸತ್ಯಕ್ಕಾಗಿ ಸಂಘರ್ಷ ನಡೆಸುತ್ತಿದೆ. ನಮ್ಮ ಹಿರಿಯ ನಾಯಕರ ಆಶಯಗಳನ್ನು ಎಂದಿಗೂ ಮರೆಯಬಾರದು. ಯುವ ಜನರಿಗಾಗಿ ಏನು ಮಾಡಬೇಕು ಎಂಬುದನ್ನು ಅರಿಯಬೇಕು ಎಂದು ಹೇಳಿದರು.
