Puttur : ಸರಕಾರಿ ಜಾಗ ಕಬಳಿಕೆಯ ದೂರಿನ ಹಿನ್ನೆಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಕ್ರಮವಾಗಿ ಹಾಕಲಾಗಿದ್ದ ಬೇಲಿ ತೆರವು ಮಾಡಿದ ಬಗ್ಗೆ ಪುತ್ತೂರು (Puttur) ತಾಲೂಕಿನ ಸರ್ವೆ ಗ್ರಾಮದಿಂದ ವರದಿಯಾಗಿದೆ.

ಸರ್ವೆ ಗ್ರಾಮದ ಕರ್ಮಿನಡ್ಕ ಎಂಬಲ್ಲಿ ಖಾಸಗೀ ವ್ಯಕ್ತಿಯೋರ್ವರು ಸರಕಾರಿ ಜಾಗ ಕಬಳಿಸಲು ಅಕ್ರಮವಾಗಿ ಬೇಲಿ ಹಾಕಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಮತ್ತು ಕೆಸಿಡಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೇಲಿ ತೆರವುಗೊಳಿಸಿ, ತಂತಿ ಹಾಗೂ ಕಂಬವನ್ನು ಜಪ್ತಿ ಮಾಡಿದ್ದಾರೆ.
ಕರ್ಮಿನಡ್ಕದಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಜಾಗವನ್ನು ಕಬಳಿಸಲು ಯಾರೋ ಬೇಲಿ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕೆಸಿಡಿಸಿ ಕಿರಿಯ ಕ್ಷೇತ್ರ ಸಹಾಯಕ ಶರತ್ ಪಿ.ಎನ್ ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮ ಸಹಾಯಕ ಉಮೇಶ್ ಕಾವಡಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯ ವೇಳೆ ಸುಮಾರು 2 ಎಕರೆಯಷ್ಟು ಜಾಗವನ್ನು ಕಬಳಿಸಲು ಯತ್ನಿಸಲಾಗಿತ್ತು ಎನ್ನುವ ಮಾಹಿತಿ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಬೇಲಿ ಹಾಕಲು ಅಳವಡಿಸಿದ್ದ 17 ಕಂಬ ಹಾಗೂ ತಂತಿಯನ್ನು ಕೆಸಿಡಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಜಪ್ತಿ ಮಾಡಿ ಕೊಂಡೊಯ್ದಿದ್ದಾರೆ. ಅಧಿಕಾರಿಗಳು ಭೇಟಿ ನೀಡುವ ವೇಳೆ ಮುಂಡೂರು ಗ್ರಾ.ಪಂ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಸ್ಥಳದಲ್ಲಿದ್ದು ಸಹಕಾರ ನೀಡಿದರು.
ಕರ್ಮಿನಡ್ಕದಲ್ಲಿ ಕೆಸಿಡಿಸಿ ಜಾಗವನ್ನು ಖಾಸಗೀ ವ್ಯಕ್ತಿಯೋರ್ವರು ಅತಿಕ್ರಮಣಕ್ಕೆ ಮುಂದಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ನಾವು ಕಂಬ ಮತ್ತು ತಂತಿಯನ್ನು ಸೀಝ್ ಮಾಡಿದ್ದೇವೆ. ಜಾಗ ಅತಿಕ್ರಮಣಕ್ಕೆ ಮುಂದಾದ ವಿಚಾರವಾಗಿ ತನಿಖೆ ನಡೆಸುತ್ತೇವೆ.ಸರಕಾರಿ ಜಾಗವನ್ನು ಕಬಳಿಸಲು ಯಾರಿಗೂ ಅವಕಾಶವಿಲ್ಲ. ಕೆಸಿಡಿಸಿಗೆ ಸೇರಿದ ಜಾಗವನ್ನು ಯಾರೇ ಕಬಳಿಸಲು ಮುಂದಾದರೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆಸಿಡಿಸಿ ಕಿರಿಯ ಕ್ಷೇತ್ರ ಸಹಾಯಕ ಶರತ್ ಪಿ.ಎನ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಿ.ಡಿ.ಒ,ಎಫ್.ಡಿ.ಎ.ಎಸ್.ಡಿ.ಎ. ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಶಿಬಿರಕ್ಕೆ ನೊಂದಾವಣೆ
