Puttur : ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಎಂಬಲ್ಲಿ ಮಹಿಳೆಯರಿಬ್ಬರಿಗೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು (Puttur) ಗ್ರಾಮಾಂತರ ಠಾಣೆಯಲ್ಲಿ ಚಿನ್ನಾಭರಣ ದರೋಡೆ, ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಡಗನ್ನೂರು ಗ್ರಾಮದ ನೇರೋಳ್ತಡ್ಕ ನಿವಾಸಿ ಸುರೇಖಾ ಮತ್ತು ಕೆಲಸದಾಕೆ ಗಿರಿಜಾ ಅವರು ಹಲ್ಲೆಗೊಳಗಾದವರು.
ಸುರೇಖಾ ಅವರ ಮನೆಗೆ ಕೆಲವೊಮ್ಮೆ ಕೆಲಸಕ್ಕೆಂದು ಬರುತ್ತಿದ್ದ ಸುರೇಶ್ ನಾಯ್ಕ ಎಂಬಾತ ಮನೆಯಲ್ಲಿನ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಸುರೇಖಾ ಮತ್ತು ಕೆಲಸದಾಕೆ ಗಿರಿಜಾ ಅವರ ಕೊಲೆಗೆ ಯತ್ನಿಸಿದ್ದಾನೆ.
ಘಟನೆ ಕುರಿತು ಸುರೇಖಾ ಅವರ ಅಕ್ಕನ ಮಗ ರವಿಚಂದ್ರ ನೀಡಿದ ದೂರಿನಂತೆ ಪೊಲೀಸರು ದರೋಡೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ,ಆರೋಪಿಯನ್ನು ಬಂಧಿಸಿದ್ದಾರೆ.
ರವಿಚಂದ್ರ ಅವರು ಚಿಕ್ಕಮ್ಮ ಸುರೇಖಾ ಅವರನ್ನು ನೋಡಿಕೊಂಡು ಅವರೊಟ್ಟಿಗೆ ವಾಸವಾಗಿದ್ದರು. ಆ. 22ರಂದು ರವಿಚಂದ್ರ ಅವರು ಬೆಳಗ್ಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಚಿಕ್ಕಮ್ಮ ಮನೆಯಲ್ಲಿ ಕಾಣದಿದ್ದಾಗ ಪಕ್ಕದ ಮನೆಯ ಗಂಗಾಧರ ಅವರು ಕರೆ ಮಾಡಿ ತಿಳಿಸಿದಂತೆ ತೋಟದಲ್ಲಿ ಚಿಕ್ಕಮ್ಮ ಮತ್ತು ಕೆಲಸದಾಕೆ ಗಿರಿಜಾ ಅವರು ಅಸ್ವಸ್ಥಗೊಂಡು ಬಿದ್ದಿರುವುದು ಬೆಳಕಿಗೆ ಬಂದಿತ್ತು.
ಗಿರಿಜಾ ಅವರ ಕುತ್ತಿಗೆಗೆ ಬೈರಾಸ್ ಅನ್ನು ಬಿಗಿಯಾಗಿ ಕಟ್ಟಲಾಗಿತ್ತು. ಕಣ್ಣುಗಳಿಗೆ, ಮುಖಕ್ಕೆ ಗುದ್ದಿದ ಗಾಯವಾಗಿತ್ತು. ಎಡ ಕಿವಿ ಹರಿದು ಹೋಗಿತ್ತು. ಈ ಕುರಿತು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್ ,ಪುತ್ತೂರು ಗ್ರಾಮಾಂತರ ಪೊಲೀಸರು ಬೇಟಿ ನೀಡಿದ್ದಾರೆ.
ಇದನ್ನೂ ಓದಿ : ಇಲಾಖೆಯ ಕಣ್ತಪ್ಪಿಸಿ ನಡೆಯುತ್ತಿದೆ ವನ್ಯಜೀವಿಗಳ ಬೇಟೆ : ಕಡವೆ ಬೇಟೆಯಾಡಿದ ಮೂವರು ಲಾಕ್ ,ಓರ್ವ ಎಸ್ಕೇಪ್
