Puttur: ಸುಮಾರು 11 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಒತ್ತಾಯಿಸಿ ಪುತ್ತೂರು( Puttur) ತಾಲೂಕು ಆಡಳಿತ ಸೌಧದ ಎದುರು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಸಹಾಯಕ ಕಮೀಷನರ್ ಅವರ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ,ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಕುಪ್ಪೆಪದವು ಅವರು, “11 ವರ್ಷಗಳ ಹಿಂದೆ ಸೌಜನ್ಯ ಎಂಬ ಹೆಣ್ಣುಮಗಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಿಐಡಿ, ಸಿಬಿಐ, ಕೋರ್ಟ್ ತನಿಖೆ ಎಲ್ಲಾ ನಡೆದೂ ಈ ತನಕ ಅತ್ಯಾಚಾರಿ ಮತ್ತು ಕೊಲೆಗಡುಕ ಯಾರು ಎಂದು ಕಂಡು ಹಿಡಿಯಲಾಗಿಲ್ಲ. ನಮಗೆ ಇಲ್ಲಿ ನ್ಯಾಯ ಮುಖ್ಯ. ಯಾವ ರೀತಿಯಲ್ಲಾದರೂ ಆಗಬಹುದು ನ್ಯಾಯ ಉಳಿಯಬೇಕು. ಆ ಮೂಲಕ ಧರ್ಮಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಲು ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಮಂಜುನಾಥ ಸ್ವಾಮಿ ಅನುಗ್ರಹ ನೀಡಬೇಕು” ಎಂದರು.
ರೈತ ಸಂಘ, ಹಸಿರು ಸೇನೆಯ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಮಾತನಾಡಿ “ಸೌಜನ್ಯ ಪ್ರಕರಣದಲ್ಲಿ ತನಿಖೆಗೆ ಸಹಕಾರ ನೀಡಿದ ಎಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ನಿವೃತ್ತ ನ್ಯಾಯಾಧೀಶರಿಂದ ಮರು ತನಿಖೆ ನಡೆಸಬೇಕು. ಮುಖ್ಯಮಂತ್ರಿಗಳು ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸುವಂತೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ರೈತ ಸಂಘದ ಜಿಲ್ಲಾ ಸಮಿತಿಯಿಂದ ಚಳುವಳಿ ನಡೆಸಲಾಗುವುದು” ಎಂದು ಎಚ್ಚರಿಸಿದರು.
ರೈತ ಸಂಘದ ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಪರಣೆ, ಈಶ್ವರ ಭಟ್ ಬಡಿಲ, ರಾಜೀವ ಗೌಡ, ಶೇಖರ್ ರೈ, ಭಾಸ್ಕರ್ ಬ್ರಹ್ಮರಕೂಟ್ಲು, ವಸಂತ ಪೆರಾಬೆ, ಸುರೇಶ್ ಭಂಡಾರಿ, ಇಸುಬು, ಯತೀಂದ್ರ ಶೆಟ್ಟಿ ಮಠ, ಭರತ್ ರೈ ಸಹಿತ ಹಲವು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: ಸೌಜನ್ಯ ಹುಟ್ಟೂರಿಗೆ ಕೊನೆಗೂ ಬಂತು ಹೊಸ ಸರ್ಕಾರಿ ಬಸ್ ! ಚಾಲನೆ ನೀಡಿದ ಸೌಜನ್ಯ ತಾಯಿ : ಬಸ್ ಬರುವಂತೆ ಮಾಡಿದ್ದು ಅವರೇ !!!
