Telangana: ಮನುಷ್ಯ ಎಷ್ಟೇ ತಂತ್ರಜ್ಞಾನ ಕಂಡುಹಿಡಿದರು ಕೂಡ ಆತನ ಮರಣವನ್ನು ಊಹಿಸಲು ಸಾಧ್ಯವಿಲ್ಲ ಅನ್ನೋದಕ್ಕೆ ಇದೊಂದು ನಿದರ್ಶನ ಎನ್ನಬಹುದು. ಅಂತೆಯೇ ಬಾಳಿ ಬದುಕಬೇಕಾದ ಸುಂದರ ಕನಸನ್ನು ಕಾಣ ಹೊರಟ ಯುವಕರ ಗುಂಪು ಒಂದು ಖುಷಿಯಲ್ಲಿ ಒಟ್ಟಾಗಿ ಕ್ರಿಕೆಟ್ ಆಡುತ್ತಿದ್ದರು. ಅಷ್ಟರಲ್ಲಿ ಜೋರು ಮಳೆ ಶುರುವಾಯಿತೆಂದು ಐವರು ಯುವಕರು ಪಕ್ಕದ ಮರದ ಕೆಳಗೆ ಓಡಿಹೋಗಿದ್ದಾರೆ ಅಷ್ಟೇ. ಅದೇ ವೇಳೆ ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೆಲಂಗಾಣದಲ್ಲಿ (Telangana) ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದ ಸತೀಶ್ ಮತ್ತು ನಾಲ್ವರು ಗೆಳೆಯರು ಕ್ರಿಕೆಟ್ ಆಡುತ್ತಿದ್ದಾಗ ಜೋರಾಗಿ ಸಿಡಿಲು ಮಳೆ ಸುರಿಯಲಾರಂಭಿಸಿದ್ದು, ಐವರು ಸಮೀಪದ ಮರದ ಕೆಳಗೆ ಹೋಗಿದ್ದಾರೆ. ಆದರೆ ಮರ ಒಂದು ಕಡೆ ವಾಲಿದ್ದರಿಂದ ಸಿಡಿಲಿನ ಪ್ರಭಾವ ಸತೀಶ್ ಎಂಬವರ ಮೇಲೆ ತಾಗಿ ಸತೀಶ್ ಸಾವನ್ನಪ್ಪಿದ್ದಾನೆ.
ಸಿಡಿಲು ಬಡಿದ ಕೂಡಲೇ ಕುಸಿದು ಬಿದ್ದ ಸತೀಶನನ್ನು ಸ್ನೇಹಿತರು ಆಸ್ಪತ್ರೆಗೆ ಸೇರಿಸಲಾಗಿದ್ದರು ಕೂಡ, ವೈದ್ಯರು ಚಿಕಿತ್ಸೆ ನೀಡುವ ಮುನ್ನವೇ ಸತೀಶ್ ಮೃತಪಟ್ಟಿದ್ದಾರೆ. ಸದ್ಯ ಸತೀಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿರಿಸಿಲ್ಲದ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.
ಸಿಡಿಲು ಬಡಿದು ಒಬ್ಬನೇ ಮಗ ಸಾವನ್ನಪ್ಪಿದಾಗ ತಂದೆ-ತಾಯಿ, ಪತ್ನಿ, ಮಕ್ಕಳು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಇದೀಗ ಸರಕಾರ ನಮ್ಮ ಕುಟುಂಬಕ್ಕೆ ಆಸರೆಯಾಗಲಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಸದ್ಯ ಗೆಳೆಯನ ಅಗಲಿಕೆಯ ಆಘಾತದಿಂದ ಉಳಿದ ನಾಲ್ವರು ಯುವಕರು ಇನ್ನೂ ಚೇತರಿಸಿಕೊಂಡಿಲ್ಲ.
